April 22, 2026
IMG-20260208-WA0078.jpg

ಚಿತ್ರದುರ್ಗ:
ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಜಂಬೂದ್ವೀಪ ಕರ್ನಾಟಕ(ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ನಗರದ ಸರಸ್ವತಿಪುರಂ ಮೊದಲ ಕ್ರಾಸ್‌ನ ಮಹಿಳಾ ಹಾಸ್ಟೆಲ್ ಮುಂಭಾಗದ ರಮಾಬಾಯಿ ಅಂಬೇಡ್ಕರ್ ವೃತ್ತದಲ್ಲಿ ಆಚರಿಸಲಾಯಿತು. ರಮಾಬಾಯಿ ಅಂಬೇಡ್ಕರ್ ಪ್ರತಿಮೆಗೆ ಹೂವಿನ ಹಾರ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಕೀಲ ವಿಶ್ವಾನಂದ್ ಅವರು ಬೌದ್ಧ ಧಮ್ಮದ ತ್ರಿಸರಣಗಳನ್ನು ಪಠಿಸಿದರು. ಶಿಕ್ಷಕ ಸಿದ್ದೇಶ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಏಳಿಗೆಯಲ್ಲಿ ಮಾತಾ ರಮಾಬಾಯಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅನಕ್ಷರಸ್ಥೆಯಾದರೂ ಜಗತ್ತಿನ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಅಪಾರ ತ್ಯಾಗ ಮಾಡಿದರು. ಇಂದಿನ ಮಹಿಳೆಯರು ಅನುಭವಿಸುತ್ತಿರುವ ಅನೇಕ ಹಕ್ಕುಗಳಿಗೆ ಪರೋಕ್ಷವಾಗಿ ರಮಾಬಾಯಿ ಕಾರಣರಾಗಿದ್ದಾರೆ ಎಂದರು.
ಪ್ರಾಧ್ಯಾಪಕ ಸಂಜೀವ ಕುಮಾರ್ ಪೋತೆ ಮಾತನಾಡಿ, ಬಾಬಾಸಾಹೇಬರ ಅಪಾರ ಜ್ಞಾನಸಾಧನೆಗೆ ಮಾತಾ ರಮಾಬಾಯಿ ಆಧಾರವಾಗಿದ್ದರು. ಸಮಾಜದಲ್ಲಿನ ಬಡತನ, ಶೋಷಣೆಯ ಕುರಿತು ಸದಾ ಚಿಂತಿಸುತ್ತಿದ್ದರು. ಅಂಬೇಡ್ಕರ್ ಅವರ ಶಿಕ್ಷಣಕ್ಕಾಗಿ ಕಠಿಣ ದಿನಗಳು ಮತ್ತು ಉಪವಾಸವನ್ನೂ ಸಹ ಅನುಭವಿಸಿದರು. ರಮಾಬಾಯಿ ಧಾರವಾಡಕ್ಕೆ ಆಗಮಿಸಿ ಅಲ್ಲಿನ ದಲಿತರ ಸ್ಥಿತಿ ಕಂಡು ತಮ್ಮ ಬಂಗಾರದ ಬಳೆಗಳನ್ನು ಮಾರಿ ಶಾಲೆ ಹಾಗೂ ಹಾಸ್ಟೆಲ್ ಸ್ಥಾಪಿಸಿದರು. ಧಾರವಾಡದಲ್ಲಿ ಮೂರು ವರ್ಷಗಳ ಕಾಲ ನೆಲೆಸಿ ಶಿಕ್ಷಣದ ಅಗತ್ಯವನ್ನು ಸಾರಿದರು. ಇದರಿಂದ ಮುಂದಿನ ದಿನಗಳಲ್ಲಿ ಧಾರವಾಡದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೆ ದಾರಿಯಾಯಿತು ಎಂದು ಹೇಳಿದರು.
ಜಂಬೂದ್ವೀಪ ಕರ್ನಾಟಕದ ರಾಜ್ಯಾಧ್ಯಕ್ಷ ಡಾ. ಸುರೇಶ್ ಕನಕಣ್ಣನವರ್ ಮಾತನಾಡಿ, ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಮಾತಲ್ಲ, ಪ್ರಾಯೋಗಿಕವಾಗಿ ಜಾರಿಯಾಗಬೇಕು. ಎಸ್‌ಇಪಿ/ಟಿಎಸ್‌ಪಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಯುವಕರು ಎಐ, ಕೃಷಿ ಹಾಗೂ ಪಶುಪಾಲನೆ ಆಧಾರಿತ ಉದ್ಯಮಗಳಲ್ಲಿ ತೊಡಗಿಕೊಳ್ಳುವುದು ಕಾಲಘಟ್ಟದ ಅಗತ್ಯವಾಗಿದೆ ಎಂದರು.
ಜಂಬೂದ್ವೀಪ ರಾಜ್ಯ ಕಾರ್ಯದರ್ಶಿ ರಾಮಕೃಷ್ಣ ಬೂದಿಹಾಳು ಮಾತನಾಡಿ, ಜಂಬೂದ್ವೀಪ ಸಂಘಟನೆ ಎಲ್ಲಾ ಸಮುದಾಯಗಳ ಏಳಿಗೆಗಾಗಿ ಸ್ಥಾಪನೆಯಾಗಿದ್ದು, ವಿಶೇಷವಾಗಿ ತಳಸಮುದಾಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ಹಾಗೂ ಯೋಜನೆಗಳ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಂಬೂದ್ವೀಪ ಜಿಲ್ಲಾಧ್ಯಕ್ಷ ಬಾಲೇನಹಳ್ಳಿ ರಾಮಣ್ಣ, ಚಿಂತಕ ಶ್ರೀನಿವಾಸರಾಜು, ವಕೀಲರಾದ ವಿಶ್ವಾನಂದ ವದ್ದೀಕೆರೆ, ಹನುಮಂತಪ್ಪ ದಡಗೂರು, ಪ್ರಕಾಶ ಯಾದಲಗಟ್ಟೆ, ವೇದಾಂತ ಏಳಂಜಿ, ರಮೇಶ್ ಕ್ಯಾಸಪುರ, ಪ್ರಾಧ್ಯಾಪಕ ಮಂಜುನಾಥ್, ಶ್ರೀನಿವಾಸ್, ಭೀಮರಾಜು, ಪ್ರದೀಪ್, ಕುಮಾರ್ ಕಸವನಹಳ್ಳಿ, ಶಿಕ್ಷಕರಾದ ರಾಮಚಂದ್ರಪ್ಪ, ಪಾತಪ್ಪ, ಹನುಮಂತಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading