August 7, 2026
IMG-20260807-WA0280


ಚಳ್ಳಕೆರೆ, ಆ.7: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ತಾಲೂಕಿನಲ್ಲಿ ಅರ್ಥಪೂರ್ಣ, ಶಿಸ್ತುಬದ್ಧ ಹಾಗೂ ಗೌರವಯುತವಾಗಿ ಆಚರಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಹಶೀಲ್ದಾರ್ ರೆಹಾನ್ ಪಾಷ ಸೂಚಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬವಾಗಿದ್ದು, ಎಲ್ಲ ಸರ್ಕಾರಿ ಇಲಾಖೆಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಈ ಬಾರಿ ಕ್ಷೇತ್ರದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ತಾಲೂಕು ಮಟ್ಟದ ಕಾರ್ಯಕ್ರಮದ ವೇಳಾಪಟ್ಟಿಯನ್ನು ನಂತರ ತಿಳಿಸಲಾಗುವುದು. ಎಲ್ಲ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಿದರು.
ಧ್ವಜಾರೋಹಣ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರ ಸನ್ಮಾನ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಂಬಂಧಿಸಿದ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ, ಅಗ್ನಿಶಾಮಕ ದಳ ಹಾಗೂ ವಿದ್ಯುತ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು. ವೇದಿಕೆ, ಆಸನ ವ್ಯವಸ್ಥೆ, ಕುಡಿಯುವ ನೀರು, ಸ್ವಚ್ಛತೆ, ಸಂಚಾರ ನಿಯಂತ್ರಣ, ಭದ್ರತೆ ಹಾಗೂ ತುರ್ತು ವೈದ್ಯಕೀಯ ಸೇವೆಗಳ ಕುರಿತು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆಯೂ ತಿಳಿಸಲಾಯಿತು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿತ ಇಲಾಖೆಗಳ ಪ್ರತಿನಿಧಿಗಳು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ನಗರಸಭೆ ಆರೋಗ್ಯ ನಿರೀಕ್ಷಕ ಗಣೇಶ್, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಪ್ರಕಾಶ್, ಶ್ರೀನಿವಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading