ಚಿತ್ರದುರ್ಗ(ಕರ್ನಾಟಕ ವಾರ್ತೆ).ಜುಲೈ.02:
ಜಲಜೀವನ್ ಮಿಷನ್ ಕಾಮಗಾರಿ ವಿಳಂಬಕ್ಕೆ ವಿಧಿಸಲಾಗುವ ಶೇ.10 ರಷ್ಟು ದಂಡಕ್ಕೆ ವಿನಾಯಿತಿ ನೀಡಲಾಗುವುದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರು ಮುಂದೆ ಬಂದು ಕೆಲಸ ಮುಗಿಸಿಕೊಟ್ಟರೆ, ಕಾಮಗಾರಿ ನಿಗದಿಪಡಿಸಿದ ಪೂರ್ಣ ಹಣವನ್ನು ಅವರಿಗೆ ಪಾವತಿ ಮಾಡಲಾಗುವುದು ಎಂದು ಜಿ.ಪಂ.ಸಿಇಓ ಡಾ.ಎಸ್.ಆಕಾಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಂಡ ವಿನಾಯಿತಿ ನೀಡಿದರೆ ಶೇ.80 ರಷ್ಟು ಗುತ್ತಿಗೆದಾರು ಜಲಜೀವನ್ ಮಿಷನ್ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದೆ ಬರುತ್ತಾರೆ, ಎಂದು ಸಹಾಯಕ ಕಾರ್ಯಪಾಲಕ ಹಾಗೂ ಕಿರಿಯ ಅಭಿಯಂತರರು ಸಲಹೆ ನೀಡಿದ್ದಾರೆ. ಇದರ ಆಧಾರದಲ್ಲಿ ಕಳಪೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರನ್ನು ಹೊರತು ಪಡಿಸಿ, ಉಳಿದವರಿಗೆ ದಂಡ ವಿನಾಯಿತಿ ನೀಡಲಾಗುವುದು. ಈ ಕುರಿತು ಜುಲೈ.8ರ ಒಳಗೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಾಮಗಾರಿ ಪೂರ್ಣಗೊಳಿಸಲು ಮನ ಒಲಿಸಬೇಕು. ಇದಕ್ಕೆ ಒಪ್ಪುವವರ ಪಟ್ಟಿ ಸಿದ್ದಪಡಿಸಿ, ತಾಲ್ಲೂಕುವಾರು ಗುತ್ತಿಗೆದಾರರನ್ನು ಖುದ್ದು ಭೇಟಿ ಮಾಡಿ ನಿರ್ದೇಶನ ನೀಡುವುದಾಗಿ ಜಿ.ಪಂ.ಸಿಇಓ ಡಾ.ಎಸ್.ಆಕಾಶ್ ಹೇಳಿದರು.
ಕಳಪೆ ಕಾಮಗಾರಿ ಗುತ್ತಿಗೆದಾರರಿಂದ ದಂಡ ವಸೂಲಿ:
ಕಳಪೆ ಎಂದು ಗುರುತಿಸಲ್ಪಟ್ಟ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ತಹಶೀಲ್ದಾರ್, ಇಓ ಹಾಗೂ ಇಂಜಿನಿಯರ್ ತಂಡ ರಚಿಸಲಾಗಿತ್ತು. ಈ ತಂಡ ವರದಿ ನೀಡಿದ್ದು, ಕಾಮಗಾರಿ ಅನುμÁ್ಠನದಲ್ಲಿ ಲೋಪ ಎಸಗಿದ ಗುತ್ತಿದಾರರಿಗೆ ದಂಡ ವಿಧಿಸಿ, ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಯಾವುದೇ ಮುಲಾಜು ತೋರದೆ ದಂಡ ವಸೂಲಿ ಮಾಡುವುದಾಗಿ ಜಿ.ಪಂ.ಸಿಇಓ ಡಾ.ಆಕಾಶ್ ಈ ಸಂದರ್ಭದಲ್ಲಿ ತಿಳಿಸಿದರು.
ಹರ್ ಘರ್ ಜಲ್ ಘೋಷಣೆಗೆ ಗಡುವು:
ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾರ್ಯಾತ್ಮಕ ನಳ ನೀರು ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡಿಸಿದ ಜಿ.ಪಂ.ಸಿಇಓ ಡಾ.ಎಸ್.ಆಕಾಶ್, ಕಾಮಗಾರಿಗಳು ಪೂರ್ಣಗೊಂಡಿದ್ದರು, ಹರ್ ಘರ್ ಜಲ್ ಘೋಷಣೆಯನ್ನು ಮಾಡದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಪ್ರತಿ ಗ್ರಾಮವಾರು ಮನೆಗಳ ನಿಖರವಾದ ಪಟ್ಟಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಜುಲೈ 10ನೇ ತಾರೀಖಿನೊಳಗೆ ಜಿಲ್ಲೆಯಲ್ಲಿ ಎಷ್ಟು ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಒದಗಿಸಲು ಸಾಧ್ಯವಿದೆ ಎಂಬ ನಿಖರವಾದ ವರದಿ ಸಲ್ಲಿಸಬೇಕು. ಆರು ತಾಲೂಕುಗಳಲ್ಲಿ ವಾರಕ್ಕೆ ತಲಾ 10 ರಂತೆ ಕಾಮಗಾರಿಗಳ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿ ಪ್ರತಿ ತಿಂಗಳು 240 ಗ್ರಾಮಗಳಲ್ಲಿ ಹರ್ ಘರ್ ಜಲ್ ಘೋಷಣೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಾದ್ಯಂತ 1,559 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 1011 ಕಾಮಗಾರಿಗಳು ಪೂರ್ಣಗೊಂಡಿವೆ. 801 ಗ್ರಾಮಗಳಲ್ಲಿ ಹರ್ ಘರ್ ಜಲ್ ಘೋಷಣೆ ಮಾಡಲಾಗಿದೆ. 615 ಕಡೆ ಪೈಪ್ ಲೈನ್ ಮುಖಾಂತರ ನೀರು ಸರಬಾರಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಭಾರತ ಸರ್ಕಾರದ ನಿಯಮಾವಳಿ ಮತ್ತು ಮಾನದಂಡಗಳ ಪ್ರಕಾರ ಗ್ರಾಮೀಣ ಭಾಗದ ಪ್ರತಿ ಮನುಷ್ಯನಿಗೆ ದಿನಕ್ಕೆ ಕನಿಷ್ಠ 55 ಲೀಟರ್ ಶುದ್ಧ ನೀರು ಪೂರೈಸುವ ಗುರಿಯೊಂದಿಗೆ 4 ಬ್ಯಾಚ್‍ಗಳಲ್ಲಿ ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಕೈಗೆ ಎತ್ತಿಕೊಳ್ಳಲಾಗಿದೆ. ಯೋಜನೆಯಡಿ ಪ್ರತಿ ಮನೆ ಮನೆಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಿ, ಪೈಪ್‍ಲೈನ್ ಮೂಲಕವೇ ನಿಗದಿತ ಪ್ರಮಾಣದ ನೀರನ್ನು ತಲುಪಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ. ನೀರಿನ ಬಳಕೆ ಆಡಿಟ್ ನಡೆಸುವ ಸಲುವಾಗಿ ಪ್ರತಿ ನಳಕ್ಕೂ ಮೀಟರ್ ಅಳವಡಿಸಲಾಗಿದೆ. ಆದರೆ ಗ್ರಾಮೀಣಭಾಗದಲ್ಲಿ ಈ ಮೀಟರ್‍ಗಳು ಸುಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಗ್ರಾಮಗಳಲ್ಲಿ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮೀಕ್ಷೆ ಆರಂಭಿಸಲಾಗಿದ್ದು, ಒಂದು ವಾರದ ಒಳಗೆ ಮಾಹಿತಿ ದೊರಕಲಿದೆ. 2019 ರಿಂದ ಆರಂಭಗೊಂಡ ಈ ಕಾಮಗಾರಿಗಳು 2023ರ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಕಾಮಗಾರಿಗ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬ ಉಂಟಾಗಿದೆ. ಎಲ್ಲಾ ತಾಲ್ಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಕಿರಿಯ ಅಭಿಯಂತರರು ಒಟ್ಟಾಗಿ ಕೆಲಸ ಮಾಡಬೇಕು. ಜಲ ಜೀವನ್ ಮಿಷನ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರತಿ ಮನೆಗೂ ನೀರು ತಲುಪುವುದನ್ನು ಅಧಿಕಾರಿಗಳು ಖುದ್ದಾಗಿ ಖಾತರಿಪಡಿಸಿಕೊಳ್ಳಬೇಕು ಎಂದು ಜಿ.ಪಂ.ಸಿಇಓ ಡಾ.ಆಕಾಶ್ ನಿರ್ದೇಶಿಸಿದರು.
ಜಿ.ಪಂ.ಉಪಕಾರ್ಯದರ್ಶಿ ಬಾಬು, ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ್, ಜಿ.ಪಂ.ಯೋಜನಾ ನಿರ್ದೇಶಕಿ ಜಯಲಕ್ಷ್ಮೀ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಕಾರ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಅಭಿನವ್, ಜಲತಜ್ಞ ದೇವರಾಜ ರೆಡ್ಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.