ನಾಯಕನಹಟ್ಟಿ, ಜೂನ್ 24: ಬಡವರು ಹಾಗೂ ಶ್ರಮಿಕ ವರ್ಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರಕಬೇಕು ಎಂಬ ಉದ್ದೇಶದಿಂದ ಸರ್ಕಾರ ಆರಂಭಿಸಿರುವ ‘ನಮ್ಮ ಕ್ಲಿನಿಕ್’ ಯೋಜನೆ ನಾಯಕನಹಟ್ಟಿಯಲ್ಲಿ ವೈದ್ಯರ ಕೊರತೆಯಿಂದ ತನ್ನ ಉದ್ದೇಶವನ್ನು ಸಂಪೂರ್ಣವಾಗಿ ಈಡೇರಿಸಲು ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಪಟ್ಟಣದ ಅಂಬೇಡ್ಕರ್ ಕಾಲೋನಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡಿರುವ ‘ನಮ್ಮ ಕ್ಲಿನಿಕ್’ನಲ್ಲಿ ಕಳೆದ ಸುಮಾರು ಎಂಟು ತಿಂಗಳಿಂದ ಕಾಯಂ ವೈದ್ಯರಿಲ್ಲದೆ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ವೈದ್ಯರಿಲ್ಲದ ಕಾರಣ ಶುಶ್ರೂಷಕಿಯರೇ ವೈದ್ಯರ ಕೆಲಸ ನಿರ್ವಹಿಸುವಂತಾಗಿದ್ದು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಕ್ಲಿನಿಕ್‌ನಲ್ಲಿ ಔಷಧಗಳ ದಾಸ್ತಾನು, ರಕ್ತ ಪರೀಕ್ಷೆ ಸೇರಿದಂತೆ ಮೂಲಭೂತ ಆರೋಗ್ಯ ಸೌಲಭ್ಯಗಳಿದ್ದು, ಒಬ್ಬ ಶುಶ್ರೂಷಕಿ, ಪ್ರಯೋಗಾಲಯ ತಜ್ಞ ಹಾಗೂ ಡಿ-ಗ್ರೂಪ್ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದಾಗ್ಯೂ ವೈದ್ಯರ ಕೊರತೆಯಿಂದ ಆರೋಗ್ಯ ಸೇವೆ ನೀಡುವಲ್ಲಿ ಸಿಬ್ಬಂದಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕೆಇಬಿ ಬಡಾವಣೆ, ಅಂಬೇಡ್ಕರ್ ಕಾಲೋನಿ, ಆಂಜನೇಯ ಬಡಾವಣೆ, ಗಣೇಶ ದೇವಸ್ಥಾನ ಬಡಾವಣೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಈ ಕ್ಲಿನಿಕ್‌ನ ಸೇವೆಯನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಸರಾಸರಿ 50ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆಗೆ ಭೇಟಿ ನೀಡುತ್ತಿರುವುದು ಕ್ಲಿನಿಕ್‌ನ ಅಗತ್ಯತೆಯನ್ನು ತೋರಿಸುತ್ತದೆ.
ಆರಂಭದ ದಿನಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದರೂ, ಕಳೆದ ಎಂಟು ತಿಂಗಳಿಂದ ವೈದ್ಯರ ನೇಮಕವಾಗಿಲ್ಲ. ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಜೊತೆಗೆ ಕಾಯಂ ತಾಲ್ಲೂಕು ಆರೋಗ್ಯಾಧಿಕಾರಿ ಇಲ್ಲದಿರುವುದು ಆರೋಗ್ಯ ವ್ಯವಸ್ಥೆಯಲ್ಲಿನ ಕೊರತೆಯನ್ನು ಎತ್ತಿ ತೋರಿಸುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ತಕ್ಷಣವೇ ಕಾಯಂ ವೈದ್ಯರನ್ನು ನಿಯೋಜಿಸಿ, ‘ನಮ್ಮ ಕ್ಲಿನಿಕ್’ನಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವಂತೆ ಸಾರ್ವಜನಿಕರು ಆರೋಗ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.