ಚಳ್ಳಕೆರೆ, ಜೂನ್ 23: ತ್ಯಾಗ, ಬಲಿದಾನ, ಮಾನವೀಯತೆ ಹಾಗೂ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಆಚರಿಸಲ್ಪಡುವ ಮೊಹರಂ ಹಬ್ಬವು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ವಿಶಿಷ್ಟ ಸಾಂಸ್ಕೃತಿಕ ರೂಪ ಪಡೆದುಕೊಂಡಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ಸೌಹಾರ್ದತೆಯ ಪ್ರತೀಕವಾಗಿ ಮೊಹರಂ ಆಚರಣೆ ನಡೆದು

ಮೊಹರಂ ಆಚರಣೆಯು ಕರ್ಬಲಾ ಯುದ್ಧದಲ್ಲಿ ಇಮಾಮ್ ಹುಸೇನ್ ಹಾಗೂ ಅವರ ಅನುಯಾಯಿಗಳು ನೀಡಿದ ಬಲಿದಾನವನ್ನು ಸ್ಮರಿಸುವ ಶೋಕಾಚರಣೆಯಾಗಿದೆ. ಹತ್ತು ದಿನಗಳ ಕಾಲ ನಡೆಯುವ ಈ ಆಚರಣೆಯು ಮಸೀದಿ ಮುಂಭಾಗದ ಅಲಾಯಿ ಕುಣಿ ತೋಡುವ ಮೂಲಕ ಆರಂಭವಾಗುತ್ತದೆ. ಇದನ್ನು ಸ್ಥಳೀಯವಾಗಿ “ಗುದ್ದಲಿ ಹಾಕುವುದು” ಎಂದು ಕರೆಯುತ್ತಾರೆ.
ಹಬ್ಬದ ಅವಧಿಯಲ್ಲಿ ಮುಸ್ಲಿಮರೊಂದಿಗೆ ಹಿಂದೂ ಸಮುದಾಯದವರೂ ಫಕೀರರಾಗಿ ವ್ರತಾಚರಣೆ ಮಾಡುವುದು ವಿಶೇಷ. ಬೆಲ್ಲದ ಪಾನಕ, ಶರಬತ್ ವಿತರಣೆ, ಹಸಿರು ಧ್ವಜಗಳ ಮೆರವಣಿಗೆ, ಅಲಾಯಿ ಕುಣಿತ, ಪೀರಲ ದೇವರ ಆರಾಧನೆ ಸೇರಿದಂತೆ ಹಲವು ಸಂಪ್ರದಾಯಗಳು ನಡೆಯುತ್ತವೆ. ಕರ್ಬಲಾದಲ್ಲಿ ನೀರಿನ ಕೊರತೆಯಿಂದ ಬಳಲಿದ ಹುಸೇನರ ಕುಟುಂಬದ ನೆನಪಿಗಾಗಿ ಶರಬತ್ ಹಂಚುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ.

ಖತಲ್ ರಾತ್ರಿಯಂದು ಪಂಜಾಗಳು ಹಾಗೂ ಪೀರಲ ದೇವರುಗಳು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತವೆ. ಈ ವೇಳೆ ಭಕ್ತರು ದೇವರ ಪಾದಗಳಿಗೆ ನೀರು ಸುರಿದು ಪೂಜೆ ಸಲ್ಲಿಸುತ್ತಾರೆ. ಕೆಲವು ಕಡೆಗಳಲ್ಲಿ ಮೊಹರಂ ದೇವರುಗಳು ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಿ ಕಾರಣಿಕ ಹೇಳುವ ಸಂಪ್ರದಾಯವೂ ಇದೆ.
ಕರ್ನಾಟಕದಲ್ಲಿ ಮೊಹರಂ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಸಾಮಾಜಿಕ ಸೌಹಾರ್ದತೆ ಮತ್ತು ಸಾಂಸ್ಕೃತಿಕ ಐಕ್ಯತೆಯ ಸಂಕೇತವಾಗಿದೆ. ಮುಸ್ಲಿಮರು ಇಲ್ಲದ ಗ್ರಾಮಗಳಲ್ಲಿಯೂ ಮೊಹರಂ ವಿಜೃಂಭಣೆಯಿಂದ ಆಚರಿಸಲ್ಪಡುವುದು ಈ ಹಬ್ಬದ ವೈಶಿಷ್ಟ್ಯವಾಗಿದೆ.

ಈ ವರ್ಷ ಅಮಾವಾಸ್ಯೆಯ ನಂತರ ಮೂರನೇ ದಿನದಿಂದ ಮೊಹರಂ ಆಚರಣೆ ಆರಂಭವಾಗಿದ್ದು, ಜೂನ್ 26ರಂದು ಹಬ್ಬದ ಸಮಾರೋಪ ನಡೆಯಲಿದೆ. ಶರಣ-ಸೂಫಿ ಪರಂಪರೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಹಾಗೂ ತ್ಯಾಗದ ಸಂದೇಶವನ್ನು ಸಾರುವ ಮೊಹರಂ ಆಚರಣೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ.



ವಿಶೇಷ ವರದಿ:
ಮೈಲನಹಳ್ಳಿ ದಿನೇಶ್ ಕುಮಾರ್
ಹವ್ಯಾಸಿ ಬರಹಗಾರ 9743810879
About The Author
Discover more from JANADHWANI NEWS
Subscribe to get the latest posts sent to your email.