ಚಳ್ಳಕೆರೆ, ಜು.2: ಸಮಾಜದ ಏಳಿಗೆಗೆ ವಚನಕಾರರ ಕೊಡುಗೆ ಅಪಾರವಾಗಿದ್ದು, ಸರ್ಕಾರ 44 ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವರ ತತ್ವ, ಆದರ್ಶ ಹಾಗೂ ಸಾಮಾಜಿಕ ಸಂದೇಶಗಳನ್ನು ಜನತೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದು ಗ್ರೇಡ್–2 ತಹಶೀಲ್ದಾರ್ ಮುನಿವೆಂಕಟಪ್ಪ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಲಿಂಗಾಯತ ಸಮುದಾಯ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಫ.ಗು. ಹಳಕಟ್ಟಿ ಜಯಂತಿ ಹಾಗೂ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಫ.ಗು. ಹಳಕಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸರ್ಕಾರ ಎಲ್ಲ ಜಾತಿ–ಸಮುದಾಯಗಳ ಮಹನೀಯರ ಜಯಂತಿಗಳನ್ನು ಆಚರಿಸುತ್ತಿರುವುದು ಅವರ ಆದರ್ಶಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶದಿಂದಾಗಿದೆ. ಜಯಂತಿಗಳು ಕೇವಲ ಆಚರಣೆಗೆ ಸೀಮಿತವಾಗದೆ, ಮಹನೀಯರ ತತ್ವಗಳು ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಫ.ಗು. ಹಳಕಟ್ಟಿ ಅವರ ಸೇವೆ ಅನನ್ಯವಾಗಿದ್ದು, ಅವರ ಆದರ್ಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಲಿಂಗಾಯತ ಸಮುದಾಯದ ಅಧ್ಯಕ್ಷ ಕಿರಣ್ ಶಂಕರ್ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಿಸುವ ಮೂಲಕ ಫ.ಗು. ಹಳಕಟ್ಟಿ ಅವರು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿದ ಅಪರೂಪದ ಮಹನೀಯರು. ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ಅನೇಕ ವಚನಕಾರರ ಅಮೂಲ್ಯ ವಚನಗಳು ಇಂದಿಗೂ ಜನರಿಗೆ ತಲುಪಲು ಅವರ ನಿರಂತರ ಪರಿಶ್ರಮವೇ ಕಾರಣವಾಗಿದೆ. ಯುವಜನತೆ ಅವರ ಜೀವನ ಸಾಧನೆ ಹಾಗೂ ಬಸವ ತತ್ವಗಳನ್ನು ಅರಿತು ಸಮಾಜಮುಖಿ ಬದುಕು ರೂಪಿಸಿಕೊಳ್ಳಬೇಕು. ಇಂತಹ ಜಯಂತಿಗಳು ಹೊಸ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕನ್ನಡ ಪ್ರಾಧ್ಯಾಪಕ ಡಾ. ರಾಜಣ್ಣ ಮಾತನಾಡಿ, ವಚನ ಸಾಹಿತ್ಯದ ಇತಿಹಾಸವನ್ನು ಅಧ್ಯಯನ ಮಾಡಲು ಫ.ಗು. ಹಳಕಟ್ಟಿ ಅವರ ಸಂಗ್ರಹ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಹಸ್ತಪ್ರತಿಗಳನ್ನು ಸಂಗ್ರಹಿಸಿ 12ನೇ ಶತಮಾನದ ವಚನ ಪರಂಪರೆಯನ್ನು ಉಳಿಸಿದ ಅವರ ಸೇವೆ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯಾಗಿದೆ. ಬಸವಣ್ಣನವರ ಸಂದೇಶಗಳನ್ನು ಸಮಾಜಕ್ಕೆ ತಲುಪಿಸಿದ ಪ್ರಮುಖರಲ್ಲಿ ಫ.ಗು. ಹಳಕಟ್ಟಿ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗ್ಯಮ್ಮ, ಶಿಲ್ಪಾ, ಪದ್ಮಾ, ನಾಗರಾಜ್, ಚಂದ್ರಣ್ಣ ಸೇರಿದಂತೆ ಲಿಂಗಾಯತ ಸಮುದಾಯದ ಮಹಿಳೆಯರು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



About The Author
Discover more from JANADHWANI NEWS
Subscribe to get the latest posts sent to your email.