ಹಿರಿಯೂರು:
ರೈತರ ಬೋರ್‌ವೆಲ್‌ಗಳಿಗೆ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಸುಟ್ಟರೆ 72 ಗಂಟೆಯೊಳಗೆ ದುರಸ್ತಿಪಡಿಸಿ ಮರು ಅಳವಡಿಸಬೇಕೆಂಬ ಸರ್ಕಾರದ ಆದೇಶವಿದ್ದರೂ, ಬೆಸ್ಕಾಂ ಅಧಿಕಾರಿಗಳು ತಿಂಗಳುಗಟ್ಟಲೆ ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಗುರುವಾರ ಹಿರಿಯೂರಿನ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕಿನಲ್ಲಿ ಸಮರ್ಪಕ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳೇ ರೈತರ ಜೀವನಾಡಿಯಾಗಿವೆ. ಮುಂಗಾರು ಮಳೆಯ ಕೊರತೆಯಿಂದ ತೋಟಗಾರಿಕೆ ಸೇರಿದಂತೆ ವಿವಿಧ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು, ಈ ಸಂದರ್ಭದಲ್ಲಿ ಸುಟ್ಟ ಪರಿವರ್ತಕಗಳನ್ನು ತ್ವರಿತವಾಗಿ ಬದಲಾಯಿಸದಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ರೈತರು, ರೈತರನ್ನು ಇಲಾಖೆಗೆ ಅಲೆದಾಡಿಸುವುದನ್ನು ನಿಲ್ಲಿಸಿ ಗುಣಮಟ್ಟದ ಪರಿವರ್ತಕಗಳನ್ನು ತಕ್ಷಣವೇ ಒದಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬೆಸ್ಕಾಂ ಸ್ಟೋರ್ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹಾವೀರ್, ಕಾರ್ಯಪಾಲಕ ಅಭಿಯಂತರ ಪೀರ್ ಸಾಬ್ ಭೇಟಿ ನೀಡಿ, ಬಾಕಿ ಇರುವ ಎಲ್ಲಾ ರೈತರ ಸುಟ್ಟ ಪರಿವರ್ತಕಗಳನ್ನು ಸೋಮವಾರದೊಳಗೆ ವಿತರಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಕೆ.ಸಿ. ಹೊರಕೇರಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಓ. ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ. ಲಕ್ಷ್ಮಿಕಾಂತ್, ಬಿ.ಡಿ. ಶ್ರೀನಿವಾಸ್, ದಸ್ತಗಿರಿ ಸಾಬ್, ಚೇತನ್ ಯಳನಾಡು, ಮೆಟಿಕುರ್ಕೆ ತಿಪ್ಪೇಸ್ವಾಮಿ, ಭಾರತೀಯ ಕಿಸಾನ್ ಸಂಘದ ಗಡಾರಿ ಕೃಷ್ಣಪ್ಪ, ಕಾತ್ರಿಕೇನಹಳ್ಳಿ ಮಂಜುನಾಥ್, ಕೆ.ಸಿ. ಚಿಕ್ಕೇಗೌಡ, ಮಹೇಶ್, ಸುಬ್ರಮಣ್ಯ, ಮಣಿಕಂಠ, ಜಯಪ್ರಕಾಶ್, ಕೆ.ಕೆ.ಹಟ್ಟಿ ಹರೀಶ್, ನಾಗಣ್ಣ, ಗಿರೀಶ್, ದೊಡ್ಡಘಟ್ಟ ಕುಮಾರ್, ಮಹಿಳಾ ಘಟಕದ ವಿ. ಕಲ್ಪನಾ, ಶಶಿಕಲಾ, ಡಾ. ಲಕ್ಷ್ಮಕ್ಕ, ಲಕ್ಕವನಹಳ್ಳಿ ಸುಬ್ರಮಣಿ, ಲಕ್ಷ್ಮಿ, ಕರಿಯಮ್ಮ, ಹೆಚ್. ರಂಗಸ್ವಾಮಿ, ಐನಹಳ್ಳಿ ರವೀಶ್, ಉಮಾಪತಿ, ಈಶ್ವರಗೆರೆ ನಾಗರಾಜ್, ವಿನಯ್, ಬೋಚಪುರ ರಮೇಶ್, ಮರದ ಮುತ್ತು, ಬ್ಯಾಡರಹಳ್ಳಿ ಶ್ರೀನಿವಾಸ್, ಎಂ.ಪಿ. ನಾಗರಾಜ್, ನಾಗಣ್ಣ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

About The Author
Discover more from JANADHWANI NEWS
Subscribe to get the latest posts sent to your email.