May 28, 2026
IMG-20260528-WA0144.jpg

ಜೂನ್ 1ರಂದು ಆರಂಭವಾಗಲಿರುವ 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಆರಂಭೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಬಿಇಒ ಕೆ.ಎಸ್. ಸುರೇಶ್ ಸೂಚಿಸಿದರು.

ಚಳ್ಳಕೆರೆ ನಗರದ ರೋಟರಿ ಬಸವ ಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಆಯೋಜಿಸಿದ್ದ ತಾಲೂಕು ಮಟ್ಟದ ಮುಖ್ಯ ಶಿಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶಾಲೆಗಳಿಗೆ ಹಸಿರು ತೋರಣ ಕಟ್ಟಿ, ಸಿಹಿ ಊಟ ವ್ಯವಸ್ಥೆ ಮಾಡಿ ಮಕ್ಕಳನ್ನು ಸಂಭ್ರಮದಿಂದ ಶಾಲೆಗೆ ಬರಮಾಡಿಕೊಳ್ಳಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಮಕ್ಕಳ ದಾಖಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ದಾಖಲಾದ ಪ್ರತಿಯೊಬ್ಬ ಮಗು ವರ್ಷಪೂರ್ತಿ ಶಾಲೆಯ ಕಲಿಕೆಯಲ್ಲಿ ತೊಡಗುವಂತೆ ಶಿಕ್ಷಕರು ಗಮನ ಹರಿಸಬೇಕು ಎಂದು ಹೇಳಿದರು.
ಮಕ್ಕಳ ಕೇಂದ್ರಿತ ಶಾಲಾ ವಾತಾವರಣ ನಿರ್ಮಾಣ ಅಗತ್ಯವಿದೆ. ಕೃಷಿಕ ಹಿನ್ನೆಲೆ, ಹಬ್ಬ-ಜಾತ್ರೆಗಳ ಸಾಂಸ್ಕೃತಿಕ ಪರಿಸರದಿಂದ ಬರುವ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾದರೂ, ಸರ್ಕಾರಿ ಶಾಲೆಗಳ ಬೆಳವಣಿಗೆ ಮಕ್ಕಳ ದಾಖಲಾತಿಯ ಮೇಲೆಯೇ ಅವಲಂಬಿತವಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಉಚಿತ ಗುಣಮಟ್ಟದ ಶಿಕ್ಷಣ, ಸಮವಸ್ತ್ರ, ಪಠ್ಯಪುಸ್ತಕ, ಶೂ-ಸಾಕ್ಸ್, ಬಿಸಿಯೂಟ ಹಾಗೂ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಅರ್ಹ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು. ಮೌಲ್ಯಾಧಾರಿತ ಹಾಗೂ ನೈತಿಕ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.
ದ್ವಿಭಾಷಾ ನೀತಿ ಯೋಜನೆಯಡಿ ಈಗಾಗಲೇ 51 ಶಾಲೆಗಳಲ್ಲಿ ಎಲ್‌ಕೆಜಿ (ಇಸಿಸಿ) ತರಗತಿಗಳು ಆರಂಭಗೊಂಡಿವೆ. ಜೊತೆಗೆ ಮೂರು ಹೊಸ ಕೆಪಿಎಸ್ ಶಾಲೆಗಳ ಆರಂಭಕ್ಕೂ ಅವಕಾಶ ದೊರೆತಿದೆ. ಅಗತ್ಯ ಶಿಕ್ಷಕರ ಮಾಹಿತಿ ಹಾಗೂ ಶಿಥಿಲಗೊಂಡಿರುವ ಶಾಲೆಗಳ ನವೀಕರಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿ.ಟಿ. ಮಂಜುನಾಥ ಸ್ವಾಮಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಂಜು ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿದರು.
ಇಸಿಒಗಳಾದ ತಿಪ್ಪೇಸ್ವಾಮಿ, ಶಿವಣ್ಣ ಕಸವನಹಳ್ಳಿ, ದೇವೇಂದ್ರಪ್ಪ, ಬಿಆರ್‌ಪಿ ತಿಪ್ಪೇಸ್ವಾಮಿ, ಸದಾಶಿವಪ್ಪ, ಸಿಆರ್‌ಪಿ ಎನ್. ಮಾರಣ್ಣ, ಬಿ. ಸುರೇಶ್, ಹನುಮಂತಪ್ಪ, ವಿಷ್ಣುವರ್ಧನ್, ರಮೇಶ್, ಜಗನ್ನಾಥ, ರಾಜಣ್ಣ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading