ಚಿತ್ರದುರ್ಗ ಮೇ.23:
ಮಹಿಳೆಯರು ಕೇವಲ ಮನೆಗೆ ಮಾತ್ರ ಸೀಮಿತವಾಗದೆ, ಹೊರಗಡೆ ಬಂದು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಲು ಸ್ವಯಂ ಉದ್ಯೋಗ ಅಗತ್ಯ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಎಂ. ರಾಮಪ್ಪ ತಿಳಿಸಿದರು.

ನಗರದ ಚಳ್ಳಕೆರೆ ರಸ್ತೆಯ ಬಾಲಾಜಿ ಲೇಔಟ್‍ನ ಮದರ್ ತೆರೆಸಾ ವಿದ್ಯಾಸಂಸ್ಥೆ ಕಟ್ಟಡದಲ್ಲಿ ಶನಿವಾರ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಭೋವಿ ಜನಾಂಗದ ನಿರುದ್ಯೋಗ ಯುವಕ, ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಟೈಲರಿಂಗ್ ತರಬೇತಿ ಹಾಗೂ ಯಂತ್ರೋಪಕರಣ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಫ್ಯಾಷನ್‍ಗಾಗಿ ಯಾರೂ ತರಬೇತಿಗೆ ಬರಬಾರದು. ನಿಗಮದ ವತಿಯಿಂದ ನೀಡಲಾಗುವ ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿ, ಕಟ್ಟುನಿಟ್ಟಾಗಿ ಭಾಗವಹಿಸಬೇಕು. ಟೈಲರಿಂಗ್ ಕಸಬು ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಅತ್ಯಂತ ಅಗತ್ಯವಾಗಿದೆ. ಪ್ರತಿ ಹಳ್ಳಿಯಲ್ಲೂ ಒಂದು ಬ್ಲೌಸ್ ಹೊಲಿಯಲು ಕನಿಷ್ಠ ರೂ.500 ಇದೆ. ಮಹಿಳೆಯರು ಮನೆಯ ಕೆಲಸದ ಜೊತೆಗೆ ದಿನಕ್ಕೆ ಕೇವಲ ಎರಡು ಬ್ಲೌಸ್ ಹೊಲಿದರೂ ತಿಂಗಳಿಗೆ ರೂ.20 ರಿಂದ 21 ಸಾವಿರ ರೂಪಾಯಿ ಆದಾಯ ಗಳಿಸಿ, ತಮ್ಮ ಕುಟುಂಬವನ್ನು ಸುಲಭವಾಗಿ ಸಲಹಬಹುದು ಎಂದು ಕಿವಿಮಾತು ಹೇಳಿದರು.
ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಜನತೆಗೆ 5 ಗ್ಯಾರಂಟಿ ಯೋಜನೆಗಳನ್ನು ತಲುಪಿಸುತ್ತಿದ್ದಾರೆ. ಇದರೊಂದಿಗೆ ಭೋವಿ ನಿಗಮದ ವತಿಯಿಂದ ಹಸು ಸಾಕಾಣಿಕೆ ಸಾಲ, 1 ಲಕ್ಷ ರೂ. ನೇರ ಸಾಲ, ಗಂಗಾ ಕಲ್ಯಾಣ ಯೋಜನೆ, ಸಾರಥಿ ವಾಹನ ಸೌಲಭ್ಯ ಸಾಲ ಹಾಗೂ ಮಹಿಳಾ ಸಂಘಗಳಿಗೆ 5 ಲಕ್ಷ ರೂ. ವರೆಗೆ ಸಾಲ ಸೇರಿದಂತೆ ಒಟ್ಟು 6 ಭಾಗ್ಯಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ ಅವರು, ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಈಗ ಹತ್ತು ವರ್ಷಗಳು ಪೂರೈಸುತ್ತಿದ್ದು, ದಶಮಾನೋತ್ಸವದ ಸಂಭ್ರಮದಲ್ಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಹಾಗೂ ಸಬಲರಾಗಬೇಕು ಎಂಬ ಉದ್ದೇಶದಿಂದಲೇ ಈ ಉಚಿತ ಟೈಲರಿಂಗ್ ತರಬೇತಿಯನ್ನು ನೀಡಲಾಗುತ್ತಿದೆ. ನಿಗಮದ ವತಿಯಿಂದ ಈ ಹಿಂದೆ ಹಸು ಹಾಗೂ ಕುರಿ ಸಾಕಾಣಿಕೆಗೆ ಧನಸಹಾಯ ಪಡೆದ ಮಹಿಳೆಯರು ಮತ್ತು ವಿದ್ಯಾವಂತ ಯುವತಿಯರು ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ನಮ್ಮ ಜನಾಂಗದವರು ಉದ್ಯೋಗಕ್ಕಾಗಿ ಬೇರೆಯವರನ್ನು ಅವಲಂಬಿಸದೆ ಸ್ವಯಂ ಉದ್ಯೋಗ ಕೈಗೊಂಡು, ಮತ್ತ ನಾಲ್ಕು ಜನರಿಗೆ ಕೆಲಸ ನೀಡುವ ಮಟ್ಟಿಗೆ ಬೆಳೆಯಬೇಕು ಎಂದು ಡಾ. ಎಂ. ರಾಮಪ್ಪ ಕಿವಿಮಾತು ಹೇಳಿದರು.
ತರಬೇತಿಯ ನಂತರ ನೀಡಲಾಗುವ ಪ್ರಮಾಣಪತ್ರ ನಿಮಗೆ ಉದ್ಯೋಗ ಭದ್ರತೆ ಒದಗಿಸಲಿದೆ. ಒಂದು ವೇಳೆ ಉದ್ಯೋಗ ದೊರೆಯದಿದ್ದರೂ ಸಹ, ಸ್ವಯಂ ಉದ್ಯೋಗದ ಮೂಲಕ ನಿಮ್ಮ ಮನೆಗಳಲ್ಲೇ ಸ್ವತಂತ್ರವಾಗಿ ಕೆಲಸ ನಿರ್ವಹಿಸಬಹುದು. ಸಮಾಜ ಕಲ್ಯಾಣ ಇಲಾಖೆ ಹಾಗೂ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ಯುವಕ-ಯುವತಿಯರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳು ಮತ್ತು ಸಹಾಯಧನ ಲಭ್ಯವಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ಮಹಿಳೆಯರು ಈ ರೀತಿ ಜಾಗೃತರಾಗಿ ತರಬೇತಿ ಪಡೆದರೆ, ನಮ್ಮ ಭೋವಿ ಜನಾಂಗದವರು ಆರ್ಥಿಕವಾಗಿ ಶಕ್ತಿವಂತರಾಗಲು ಸಾಧ್ಯವಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದರು.
ತರಬೇತಿಗೆ ಬರುವಾಗ ಮತ್ತು ಹೋಗುವಾಗ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ನೀಡಬೇಕು ಹಾಗೂ ಸಹಿ ಮಾಡಬೇಕು. ದಿನನಿತ್ಯದ ಹಾಜರಾತಿಯನ್ನು ಜಿಪಿಎಸ್ ಫೋಟೋಗಳ ಮೂಲಕ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗುತ್ತದೆ. ತರಬೇತಿಯ ಹಾಜರಾತಿಯಲ್ಲಿ ಯಾವುದೇ ರೀತಿಯ ಪ್ರಭಾವ ಅಥವಾ ರಿಯಾಯಿತಿಗಳಿಗೆ ಅವಕಾಶವಿರುವುದಿಲ್ಲ. ತರಬೇತಿ ಅವಧಿಯಲ್ಲಿ ನಾನು ಯಾವುದೇ ಸಮಯದಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ. ಒಂದು ವೇಳೆ ಯಾರಾದರೂ ಗೈರುಹಾಜರಾಗಿದ್ದರೆ, ಅವರ ಹೆಸರನ್ನು ಪಟ್ಟಿಯಿಂದ ತಕ್ಷಣವೇ ಡಿಲೀಟ್ ಮಾಡಿಸಲಾಗುವುದು ಮತ್ತು ಅವರಿಗೆ ನಿಗಮದಿಂದ ನೀಡಲಾಗುವ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವುದಿಲ್ಲ. ಕೇವಲ ಅನಿರೀಕ್ಷಿತ, ತುರ್ತು ಕೌಟುಂಬಿಕ ಸಮಸ್ಯೆಗಳಿದ್ದಲ್ಲಿ ಮಾತ್ರ ಮುಂಚಿತವಾಗಿ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ ರಿಯಾಯಿತಿ ಪಡೆಯಬಹುದು ಎಂದು ಹೇಳಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಜನಾಂಗದ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ನಿಗಮದ ಯೋಜನೆಗಳು ಪೂರಕವಾಗಿವೆ ಎಂದು ಆಶಿಸಿದರು.
ಐಟಿ-ಬಿಟಿ ವಲಯದಲ್ಲಿ ‘ವರ್ಕ್ ಫ್ರಮ್ ಹೋಮ್’ ಇರುವಂತೆ, ಯುವಕ-ಯುವತಿಯರು ಮನೆಯಲ್ಲೇ ಇದ್ದು ಟೈಲರಿಂಗ್ ಅಥವಾ ಅಂಗಡಿ-ಮುಂಗಟ್ಟುಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ತರಬೇತಿ ನೆರವಾಗಲಿದೆ.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಅವರು ಅಧಿಕಾರ ವಹಿಸಿಕೊಂಡ ಕೇವಲ ಆರು ತಿಂಗಳಲ್ಲಿ ಈ ಹಿಂದೆ ಎಂದೂ ಹಮ್ಮಿಕೊಳ್ಳದ ವಿಶೇಷ ಯೋಜನೆಗಳು ಮತ್ತು ಹೊಸ ಆಯಾಮಗಳನ್ನು ಜಾರಿಗೆ ತರುತ್ತಿದ್ದಾರೆ. ಸಮಾಜವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಹಾಗೂ ಪ್ರಬುದ್ಧ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವರ ಕಾರ್ಯಯೋಜನೆಗಳು ಶ್ಲಾಘನೀಯ ಎಂದರು.
ಭೋವಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ ನಾಯ್ಕ್ ಮಾತನಾಡಿ, ಮಹಿಳೆಯರು ಪುರುಷ ಪ್ರಧಾನ ಸಮಾಜದಲ್ಲಿ ಸಮಾನ ಹಕ್ಕು, ಪ್ರಾತಿನಿಧ್ಯ ಪಡೆದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಬಲರಾಗಬೇಕು ಎನ್ನುವುದೇ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಟೈಲರಿಂಗ್ ತರಬೇತಿಯು ಸುಮಾರು 75 ದಿನಗಳ ಕಾಲ ನಡೆಯಲಿದ್ದು, ಪ್ರಾಯೋಗಿಕ ಹಾಗೂ ತರಗತಿಗಳ ಮೂಲಕ ಮಷೀನ್ ಆಪರೇಟ್ ಮಾಡುವುದು, ಕಟಿಂಗ್ ಮತ್ತು ಹೊಲಿಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಮುಗಿದ ನಂತರ ಎಲ್ಲರಿಗೂ ಕಡ್ಡಾಯವಾಗಿ ಗಾಮೆರ್ಂಟ್ಸ್ ಫ್ಯಾಕ್ಟರಿಗಳಲ್ಲಿ ಕೆಲಸ ಸಿಗುವ ಆದೇಶದೊಂದಿಗೆ ಪವರ್ ಮಷೀಓನ್‍ಗಳನ್ನು ವಿತರಿಸಲಾಗುವುದು. ಈಗಾಗಲೇ ಮೈಸೂರಿನಲ್ಲಿ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಯಾರು ಶ್ರದ್ಧೆಯಿಂದ ಕಲಿತು ಆರ್ಥಿಕವಾಗಿ ಮುಂದೆ ಬಂದು ಕುಟುಂಬವನ್ನು ಸಾಕಬೇಕು ಎಂಬ ಮನಸ್ಸಿಟ್ಟಿದ್ದಾರೋ ಅಂತಹವರು ಮಾತ್ರ ಈ ತರಬೇತಿಯ ಪ್ರಯೋಜನ ಪಡೆಯಬೇಕು. ತರಬೇತಿಗೆ ಗೈರುಹಾಜರಾದರೆ ತಕ್ಷಣವೇ ಅಂತವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ, ರಾಜ್ಯ ಸರ್ಕಾರವು ಬಡವರ ಮತ್ತು ಶೋಷಿತ ಸಮುದಾಯಗಳ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳ ಜಾರಿಗೆ ತಂದಿದ್ದು, ಭೋವಿ ಜನಾಂಗದ ಯುವಕ-ಯುವತಿಯರು ಇದರ ಸೌಲಭ್ಯ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಮಪ್ಪನವರು ಕೇವಲ ಅಧಿಕಾರಕ್ಕೆ ಸೀಮಿತವಾಗದೆ, ನಿಗಮದ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕು ಎಂಬ ಪ್ರಾಮಾಣಿಕ ಉದ್ದೇಶದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ವೈ.ರವಿಕುಮಾರ್, ಭೋವಿ ಸಮಾಜದ ಮುಖಂಡ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.