July 22, 2026
IMG20260722133705_01

oplus_0



ಚಳ್ಳಕೆರೆ, ಜು.22: ತಾಲೂಕಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ರೈತರು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆವಿಮೆ ಮಾಡಿಸಿಕೊಳ್ಳುವಂತೆ ಕೃಷಿ ಇಲಾಖೆ ಮನವಿ ಮಾಡಿದೆ. ಬೆಳೆ ನಷ್ಟದ ಸಂದರ್ಭದಲ್ಲಿ ರೈತರಿಗೆ ಆರ್ಥಿಕ ನೆರವು ಒದಗಿಸಿ, ಮುಂದಿನ ಹಂಗಾಮಿನಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ನೆರವಾಗುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆ, ಪ್ರಸ್ತುತ ಬರದಂತಹ ಪರಿಸ್ಥಿತಿಯಲ್ಲಿ ರೈತರಿಗೆ ಮಹತ್ವದ ಆಸರೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಲ್ಲಿ ಜುಲೈ 1ರಿಂದ 15ರವರೆಗೆ ಶೇ.71ರಷ್ಟು ಮಳೆ ಕೊರತೆ ದಾಖಲಾಗಿದ್ದು, ಹಲವೆಡೆ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಬಿತ್ತನೆಗೊಂಡಿರುವ ಪ್ರದೇಶಗಳಲ್ಲೂ ಬೆಳೆ ಒಣಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಬೆಳೆಯುವ ರೈತರು ಜುಲೈ 31ರೊಳಗೆ ಕಡ್ಡಾಯವಾಗಿ ಬೆಳೆವಿಮೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ಮನವಿ ಮಾಡಿದೆ.
ತಾಲೂಕಿನ 40 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೃಷಿ ಸಖಿಯರ ಮೂಲಕ ಕರಪತ್ರ ವಿತರಣೆ, ಕಸ ವಿಲೇವಾರಿ ವಾಹನಗಳ ಮೂಲಕ ಧ್ವನಿವರ್ಧಕ ಪ್ರಚಾರ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಮಾಹಿತಿ ತಲುಪಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಮನೆಮನೆಗೆ ತೆರಳಿ ಯೋಜನೆಯ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಕೃಷಿ ಇಲಾಖೆಯ ಎಫ್‌ಐಡಿ (FID) ವ್ಯವಸ್ಥೆಯಲ್ಲಿ ತಾಲೂಕಿನ ಸುಮಾರು 57 ಸಾವಿರ ರೈತರು ನೋಂದಾಯಿಸಿಕೊಂಡಿದ್ದು, ಇದುವರೆಗೆ 15,079 ರೈತರು ಬೆಳೆವಿಮೆ ಯೋಜನೆಗೆ ಹೆಸರು ನೋಂದಾಯಿಸಿದ್ದಾರೆ. ಉಳಿದ ರೈತರೂ ಶೀಘ್ರವೇ ನೋಂದಣಿ ಮಾಡಿಸಿಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ.
ಐದು ವಿಧದ ಬೆಳೆವಿಮೆ ಸೌಲಭ್ಯಗಳು
● ಬಿತ್ತನೆ ಪೂರ್ವ ಬೆಳೆವಿಮೆ:
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಸೂಚಿತ ಬೆಳೆಯು ಶೇ.75ರಷ್ಟು ಬಿತ್ತನೆಯಾಗದೇ ಇದ್ದಲ್ಲಿ ಅಥವಾ ಆರಂಭದಲ್ಲೇ ನಷ್ಟವಾದರೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ ದೊರೆಯುತ್ತದೆ. ಚಳ್ಳಕೆರೆ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೇಂಗಾ ಬೆಳೆಯನ್ನು ಅಧಿಸೂಚನೆ ಮಾಡಲಾಗಿದ್ದು, ಬೆಳಗೆರೆ ಗ್ರಾಮ ಪಂಚಾಯಿತಿಯಲ್ಲಿ ಶೇಂಗಾ ಜೊತೆಗೆ ಸಾಮೆ ಬೆಳೆಯನ್ನೂ ಅಧಿಸೂಚನೆಗೆ ಒಳಪಡಿಸಲಾಗಿದೆ.
● ಮಧ್ಯಂತರ ಪರಿಹಾರ:
ಬಿತ್ತನೆ ಮಾಡಿದ ಮೊದಲ 30 ದಿನಗಳಲ್ಲಿ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಜಂಟಿ ಸಮೀಕ್ಷೆಯಲ್ಲಿ ಶೇ.50ರಷ್ಟು ನಷ್ಟ ಕಂಡುಬಂದರೆ ವಿಮಾ ಮೊತ್ತದ ಶೇ.25ರಷ್ಟು ಮಧ್ಯಂತರ ಪರಿಹಾರ ನೀಡಲಾಗುತ್ತದೆ.
● ಕಟಾವು ಆಧಾರಿತ ಬೆಳೆವಿಮೆ:
ಪ್ರಸ್ತುತ ಹಂಗಾಮಿನ ಇಳುವರಿಯನ್ನು ಕಳೆದ ಏಳು ವರ್ಷಗಳ ಅತ್ಯುತ್ತಮ ಐದು ವರ್ಷದ ಸರಾಸರಿ ಇಳುವರಿಯೊಂದಿಗೆ ಹೋಲಿಕೆ ಮಾಡಿ ಕಡಿಮೆ ಇಳುವರಿ ಬಂದಲ್ಲಿ ಪರಿಹಾರ ನೀಡಲಾಗುತ್ತದೆ.
● ಸ್ಥಳೀಯ ವಿಕೋಪ ವಿಮೆ:
ಆಲಿಕಲ್ಲು ಮಳೆ, ಗುಡುಗು-ಸಿಡಿಲು ಸೇರಿದಂತೆ ಸ್ಥಳೀಯ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ 72 ಗಂಟೆಗಳೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಜಂಟಿ ಸಮೀಕ್ಷೆಯ ಬಳಿಕ ಪರಿಹಾರ ಮಂಜೂರು ಮಾಡಲಾಗುತ್ತದೆ.
● ಕೊಯ್ಲೋತ್ತರ ಬೆಳೆವಿಮೆ:
ಬೆಳೆ ಕಟಾವು ಮಾಡಿದ ಬಳಿಕ 14 ದಿನಗಳೊಳಗೆ ಮಳೆ ಅಥವಾ ಇತರೆ ಪ್ರಕೃತಿ ವಿಕೋಪಗಳಿಂದ ಹಾನಿಯಾದರೂ ರೈತರಿಗೆ ವಿಮಾ ಪರಿಹಾರ ದೊರೆಯುತ್ತದೆ.
ಇಫ್ಕೋ ಟೋಕಿಯೋ ಸಂಸ್ಥೆ ಆಯ್ಕೆ
2026-27ನೇ ಸಾಲಿನ ಬೆಳೆವಿಮೆ ಯೋಜನೆ ಅನುಷ್ಠಾನಕ್ಕಾಗಿ ಇಫ್ಕೋ ಟೋಕಿಯೋ ಜನರಲ್ ಇನ್ಶುರೆನ್ಸ್ ಸಂಸ್ಥೆಯನ್ನು ಸರ್ಕಾರ ಆಯ್ಕೆ ಮಾಡಿದೆ. ಬೆಳೆ ಹಾನಿಯಾದ ತಕ್ಷಣ ನಿಗದಿತ ಅವಧಿಯೊಳಗೆ ಸಂಸ್ಥೆಗೆ ಮಾಹಿತಿ ನೀಡುವುದು ಅತ್ಯಗತ್ಯ ಎಂದು ಕೃಷಿ ಇಲಾಖೆ ತಿಳಿಸಿದೆ.
ಬಾಕ್ಸ್
“ತಾಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿರುವುದರಿಂದ ಶೇಂಗಾ ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಬರದಂತಹ ಪರಿಸ್ಥಿತಿಯಲ್ಲಿ ಬೆಳೆವಿಮೆ ರೈತರಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಯೋಜನೆಯಾಗಿದೆ. ಯಾವುದೇ ಗೊಂದಲಕ್ಕೆ ಒಳಗಾಗದೆ ಅರ್ಹ ರೈತರು ಕಡ್ಡಾಯವಾಗಿ ಬೆಳೆವಿಮೆ ನೋಂದಣಿ ಮಾಡಿಸಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ಸಖಿಯರು ಗ್ರಾಮ ಮಟ್ಟದಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು.”
– ರಮೇಶ್
ಕೃಷಿ ಇಲಾಖೆ ಅಧಿಕಾರಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading