May 22, 2026
IMG-20260522-WA0219.jpg

ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ರೈತರ ಪರವಾಗಿ ಹಾಗೂ ರೈತರ ಹಿತಕ್ಕಾಗಿ ಉದಯಿಸಿದ ಪಕ್ಷ ಜೆಡಿಎಸ್ ಎಂದು ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್ ಹೇಳಿದರು.
ಪಟ್ಟಣದ ಜಯದೇವ ಸಮುದಾಯ ಭವನದಲ್ಲಿ ನಡೆದ ತಾಲೂಕು ಜೆಡಿಎಸ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷ ಜಿ. ಗಣೇಶ್ ಮೂರ್ತಿ ಅವರಿಂದ ಪದಗ್ರಹಣ ಸ್ವೀಕರಿಸಿದ ತಾಲೂಕು ಜೆಡಿಎಸ್ ಅಧ್ಯಕ್ಷ ಜಿ. ಕಿರಣ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ರೈತರ ಸಾಲ ಮನ್ನಾ ಮಾಡಿದ್ದು ಹಾಗೂ ಅಂಗವಿಕಲರಿಗೆ ಸಹಾಯಧನ ನೀಡಿದವರು ಎಚ್.ಡಿ. ಕುಮಾರಸ್ವಾಮಿ ಎಂದು ಹೇಳಿದರು. ಬಿಜೆಪಿ–ಜೆಡಿಎಸ್ ಪಕ್ಷಗಳು ಕೇಂದ್ರದಲ್ಲಿ ಸಮ್ಮಿಶ್ರವಾಗಿ ಅಧಿಕಾರ ನಡೆಸುತ್ತಿದ್ದು, ರಾಜ್ಯದಲ್ಲಿ ಮುಂಬರುವ ಚುನಾವಣೆಯನ್ನು ಎದುರಿಸಲು ಜೆಡಿಎಸ್ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.
ಅಭ್ಯರ್ಥಿಗಳ ಆಯ್ಕೆ ಪಕ್ಷದ ತೀರ್ಮಾನದ ಮೇರೆಗೆ ನಡೆಯಲಿದ್ದು, ತಾಲೂಕಿನ ಎಲ್ಲಾ ಬೂತ್‌ಗಳಲ್ಲಿ ಪಕ್ಷವನ್ನು ಸಜ್ಜುಗೊಳಿಸಿ ಕಾರ್ಯಕರ್ತರನ್ನು ಕಟ್ಟಿಕೊಡಲಾಗುವುದು ಎಂದು ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷ ಜಿ. ಗಣೇಶ್ ಮೂರ್ತಿ ಅವರಿಂದ ಪದಗ್ರಹಣ ಸ್ವೀಕರಿಸಿ ಮಾತನಾಡಿದ ತಾಲೂಕು ಜೆಡಿಎಸ್ ಅಧ್ಯಕ್ಷ ಜಿ. ಕಿರಣ್, ರೈತನ ಮಗನಾಗಿ ದೇಶದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಎಚ್.ಡಿ. ದೇವೇಗೌಡ ಸ್ಥಾಪಿಸಿದ ಈ ಪಕ್ಷದಲ್ಲಿ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಯಕರ್ತರಿಗೆ ಸದಾ ಗೌರವವಿದೆ ಎಂದು ಹೇಳಿದರು.
ಬೂತ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸಿ ಪಕ್ಷವನ್ನು ಬಲಪಡಿಸಲಾಗುವುದು. ಹೊಸದುರ್ಗ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು. ಯುವಕರನ್ನು ಬೆಳೆಸುವ ಏಕೈಕ ಪಕ್ಷ ಜೆಡಿಎಸ್ ಆಗಿದ್ದು, ಪಕ್ಷಕ್ಕೆ ನಿರಂತರ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಘಟಕದ ರಾಜ್ಯ ಕಾರ್ಯದರ್ಶಿ ಶಿವಶಂಕರ್ ಯಾದವ್ ಮಾತನಾಡಿ, ಪ್ರತಿ ಐದು ವರ್ಷಕ್ಕೊಮ್ಮೆ ಪಕ್ಷದ ಅಧ್ಯಕ್ಷರ ಬದಲಾವಣೆ ಸಹಜ. ಮಾಜಿ ಅಧ್ಯಕ್ಷ ಗಣೇಶಮೂರ್ತಿ ಅವರ ಸೇವೆ ಪಕ್ಷದ ಸಂಘಟನೆಗೆ ಉತ್ತಮವಾಗಿತ್ತು. ಅವರ ರೀತಿಯಲ್ಲಿಯೇ ಇನ್ನೂ ಹೆಚ್ಚಿನ ಸೇವೆಯನ್ನು ನೂತನ ಅಧ್ಯಕ್ಷರು ಮಾಡಬೇಕಿದೆ ಎಂದು ಸಲಹೆ ನೀಡಿದರು.
ನಿಕಟ ಪೂರ್ವ ಅಧ್ಯಕ್ಷ ಜಿ. ಗಣೇಶಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾ. ಮೈಲಾರಪ್ಪ, ಶ್ರೀಧರ ನಾಯ್ಕ, ರಾಕೇಶ್ ಗೌಡ, ಕೊಂಡಾಪುರ, ಡಿ.ಕೆ. ಶಿವಣ್ಣ, ಕಲ್ಪನಾ, ಮಮತಾ, ರಫಿಕ್, ವಜೀರ್ ಸಾಬ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading