ಹೊಸದುರ್ಗ: ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಸಂಸ್ಥಾಪಕ ಹಾಗೂ ಕಾರ್ಯಾಧ್ಯಕ್ಷ ನಾಗತಿಹಳ್ಳಿ ಮಂಜುನಾಥ್ ಅವರ ನೇತೃತ್ವದಲ್ಲಿ ಹೊಸದುರ್ಗ ಪಟ್ಟಣದ ಕನ್ನಡ ಭವನದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಉಭಯ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ 9ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ ಆರ್, “ಹಿಂದೆ ಎಸ್‌ಎಸ್‌ಎಲ್‌ಸಿ ನಂತರವೇ ಸರ್ಕಾರಿ ಉದ್ಯೋಗ ಸಿಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ಪಿಯುಸಿ ಹಾಗೂ ಪದವಿ ಬಳಿಕವೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ತೇರ್ಗಡೆಯಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
“ಇಂದಿನ ಕಾಲಘಟ್ಟದಲ್ಲಿ ಕೇವಲ ಅಂಕಗಳು ಅಥವಾ ಅಂಕಪಟ್ಟಿ ಮಾತ್ರ ಕೆಲಸ ಕೊಡಿಸುವುದಿಲ್ಲ. ಪಿಹೆಚ್‌ಡಿ ಪದವೀಧರರೂ ಸಹ ವೃತ್ತಿಪರ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಜೊತೆಗೆ ವಿವಿಧ ಜ್ಞಾನ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಪಿಯುಸಿ ಪೂರ್ಣಗೊಂಡ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿ ನಿರಂತರವಾಗಿ ಪರೀಕ್ಷೆಗಳಲ್ಲಿ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. “ತಂದೆ-ತಾಯಿಗಳು ಶ್ರಮಪಟ್ಟು ಮಕ್ಕಳನ್ನು ಓದಿಸುತ್ತಾರೆ. ಅವರ ಕನಸು ಹಾಗೂ ನಂಬಿಕೆಗೆ ತಕ್ಕಂತೆ ಬದುಕಬೇಕು” ಎಂದು ಶುಭ ಹಾರೈಸಿದರು.
ಧತ್ತಿ ನಿಧಿಯನ್ನು ಉದ್ಘಾಟಿಸಿ ಮಾತನಾಡಿದ ಕನಕ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಹೆಚ್. ಕೃಷ್ಣಮೂರ್ತಿ, “ಸಂಘಟನೆ ಕಟ್ಟುವುದು ಸುಲಭದ ಮಾತಲ್ಲ. ಸಮಾಜಮುಖಿ ಕೆಲಸ ಮಾಡಲು ಎದೆಗಾರಿಕೆ, ಬುದ್ಧಿವಂತಿಕೆ ಹಾಗೂ ತಾಳ್ಮೆ ಅಗತ್ಯ. ಇಂತಹ ಸಂಘಟನೆಗಳಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ” ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಅಧ್ಯಕ್ಷ ಲಕ್ಷ್ಮೀಸಾಗರ್ ಎಸ್ ವಹಿಸಿದ್ದರು. ತಾಲೂಕು ಶ್ರೀ ವೀರ ಮಡಿವಾಳ ಮಾಚಿದೇವ ಸಂಘದ ಮಾಜಿ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಎನ್.ಕೆ. ತಿಪ್ಪೇಸ್ವಾಮಿ ವಿದ್ಯಾರ್ಥಿಗಳ ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹರಿಹರ ನಗರಸಭೆಯ ಕಂದಾಯ ನಿರೀಕ್ಷಕಿ ಶ್ರೀಮತಿ ಚೈತ್ರ ಕೆ.ಎನ್., ಮಾಡದಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಕೆರೆ ಅಂಜನಮೂರ್ತಿ, ಗೊರವಿನಕಲ್ಲು ಚಿದಾನಂದ, ಜಾನಕಲ್ಲು ಹೆಚ್. ಹನುಮಂತಪ್ಪ, ಸ್ಟುಡಿಯೋ ಬಸವರಾಜ್, ರಾಜು ಬುಳಸಾಗರ, ಪುನಿತ್ ಕುಮಾರ್ ಬೀಡಾ, ರವಿಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಯೋಗಿತಾ ಜಿ ಅವರ ನೃತ್ಯ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಬಾಕ್ಸ್ ಐಟಂ
“ವಿದ್ಯಾರ್ಥಿಗಳಿಗೆ ಬಹುಮುಖ ಪ್ರತಿಭೆ ಅಗತ್ಯ”
ವಿದ್ಯಾರ್ಥಿಗಳು ಅಂಕಗಳ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮುಖ ಪ್ರತಿಭೆ ಬೆಳೆಸಿಕೊಂಡರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಮಕ್ಕಳು ಕ್ರಿಯಾಶೀಲರಾಗಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಗುರಿ ಸಾಧಿಸಬೇಕು. ಮನಸ್ಸನ್ನು ಮಲೀನ ಮಾಡಿಕೊಳ್ಳದೇ ವಿದ್ಯಾಭ್ಯಾಸದ ಕಡೆ ಗಮನಹರಿಸಿದರೆ ಯಶಸ್ಸು ಖಚಿತ ಎಂದು ನಾಗತಿಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.
About The Author
Discover more from JANADHWANI NEWS
Subscribe to get the latest posts sent to your email.