May 20, 2026
FB_IMG_1779197350634.jpg

ಚಿತ್ರದುರ್ಗ.ಮೇ.19:
ಹಿರಿಯೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ತಕ್ಷಣವೇ ಪರ್ಯಾಯ ಮಾರ್ಗಗಳ ಮೂಲಕ ಸಾರ್ವಜನಿಕರಿಗೆ ನೀರು ಕಲ್ಪಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಈ ಕುರಿತ ತುರ್ತು ಪರಿಶೀಲನಾ ಸಭೆ ವಹಿಸಿ ಅವರು ಮಾತನಾಡಿದರು.
ಬೋರ್‌ವೆಲ್ ವಿಫಲಗೊಂಡಿರುವ ಹಾಗೂ ಖಾಸಗಿ ಬೋರ್‌ವೆಲ್ ಲಭ್ಯವಿರದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಬೇಕು. ಓಬಳಾಪುರ ತಾಂಡಾಕ್ಕೆ ಬಳಕೆ ಕೆರೆಯ ನೀರನ್ನು ನೀಡಿದರೂ, ಹತ್ತಿರದ ಗ್ರಾಮಗಳ ಆರ್.ಓ ಪ್ಲಾಂಟ್‌ನಿAದ 20 ಲೀಟರ್ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಲು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಆಟೋ ಟ್ರಾಲಿ ಅಥವಾ ಕಂಟೈನರ್ ವಾಹನ ಬಾಡಿಗೆ ಪಡೆಯುವಂತೆ ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಹೈಡ್ರೋ ಫ್ರಾಕ್ಚರಿಂಗ್‌ಗೆ ಸಲಹೆ:
ಮಳೆ ಇಲ್ಲದೆ ಅಂತರ್ಜಲ ಸಂಪೂರ್ಣ ಕುಸಿದಿರುವುದು ನಿಜ. ಆದರೆ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ. ಬೋರ್‌ವೆಲ್‌ಗಳು ಬತ್ತಿ ಹೋಗಿವೆ ಎಂದು ಕೈಕಟ್ಟಿ ಕುಳಿತುಕೊಳ್ಳದೆ, ಅಂತರ್ಜಲ ಮಟ್ಟ ಕುಸಿದು ಬತ್ತಿಹೋಗಿರುವ ಅಸ್ತಿತ್ವದಲ್ಲಿರುವ ಬೋರ್‌ವೆಲ್‌ಗಳಿಗೆ ‘ಹೈಡ್ರೋ ಫ್ರಾಕ್ಚರಿಂಗ್’ ತಂತ್ರಜ್ಞಾನವನ್ನು ಬಳಸಿ ಮರುಪೂರಣ ಮಾಡಲು ಪ್ರಯತ್ನಿಸುವಂತೆ ಅಧಿಕಾರಿಗಳಿಗೆ ಸಂಸದ ಗೋವಿಂದ ಎಂ. ಕಾರಜೋಳ ಸಲಹೆ ನೀಡಿದರು. ಬಹುಗ್ರಾಮ ಹಾಗೂ ಜೆ.ಜೆ.ಎಂ ಅಡಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಲಿಂಕ್‌ಗಳ ಮೂಲಕ ಅಗತ್ಯವಿರುವ ಕಡೆಗೆ ನೀರು ಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ಹೊಸ ಬೋರ್‌ವೆಲ್ ಕೊರೆಯುವುದಕ್ಕೆ ಬ್ರೇಕ್; ಟ್ಯಾಂಕರ್ ಬಳಕೆ ಕಡಿತ
ಕಳೆದ ವರ್ಷದ ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 800ಕ್ಕೂ ಹೆಚ್ಚು ಹೊಸ ಬೋರ್‌ವೆಲ್‌ಗಳನ್ನು ಕೊರೆಯಲಾಗಿತ್ತು. ಆದರೆ ಈ ಬಾರಿ ಹೊಸ ಬೋರ್‌ವೆಲ್ ಕೊರೆಯುವ ಪ್ರಕ್ರಿಯೆಯನ್ನು ಗರಿಷ್ಠ ಮಟ್ಟಿಗೆ ನಿಯಂತ್ರಿಸಲಾಗಿದ್ದು, ಜಿಲ್ಲೆಯಾದ್ಯಂತ ಕೇವಲ 70 ಹೊಸ ಬೋರ್‌ವೆಲ್‌ಗಳನ್ನು ಮಾತ್ರ ಕೊರೆಯಲಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ಕಡಿತಗೊಳಿಸಲಾಗಿದ್ದು, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ಮಾಹಿತಿ ನೀಡಿದರು.
ಹಿರಿಯೂರು ತಾಲ್ಲೂಕಿನ 10 ಗ್ರಾಮ ಪಂಚಾಯಿತಿಗಳ 23 ಜನ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿ ಸಮಸ್ಯೆ ತಲೆದೋರಿದೆ. ಈ ಗ್ರಾಮಗಳಲ್ಲಿ ಒಟ್ಟು 24 ಹೊಸ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಪೈಕಿ 7 ಕೊಳವೆ ಬಾವಿಗಳು ವಿಫಲವಾಗಿವೆ. ತಾಲ್ಲೂಕಿನಾದ್ಯಂತ 181 ಶುದ್ದ ಕುಡಿಯುವ ನೀರಿನ ಘಟಕಗಳು ಇದ್ದು, 175 ಕಾರ್ಯಾಚರಣೆ ನಡೆಸುತ್ತಿವೆ. 2 ದುರಸ್ತಿ ಹಂತದಲ್ಲಿದ್ದು, 4 ಸ್ತಗಿತಗೊಂಡಿವೆ. ತಾಲ್ಲೂಕಿನ ಒಟ್ಟು ರೂ.65 ಲಕ್ಷ ಹಣವನ್ನು ಕುಡಿಯುವ ನೀರಿನ ಸರಬರಾಜಿಗಾಗಿ ಬಿಡುಗಡೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಇದರೊಂದಿಗೆ ಕಿರಿಯ ಇಂಜಿನಿಯರ್‌ಗಳು ಸಹ ಸಮಸ್ಯಾತ್ಮಕ ಹಳ್ಳಿಗಳಿಗೆ ಭೇಟಿ, ಕುಡಿಯುವ ನೀರು ಸರಬರಾಜಿಗೆ ಪ್ರಯತ್ನಿಸುತ್ತಿದ್ದಾರೆ. ಪತ್ರಿಕೆಗಳಲ್ಲಿ ಬರುವ ವರದಿಗಳಿಗೆ ತಕ್ಷಣವೇ ಸ್ಪಂದಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಇದರೊಂದಿಗೆ ಗ್ರಾಮ್ ಫೋನ್ ಸಹಾಯವಾಗಿ ದೂರು ದಾಖಲಿಸಿದ 23 ಪ್ರಕರಣಗಳಲ್ಲಿಯೂ ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ.ಸಿಇಓ ಡಾ.ಆಕಾಶ್ ತಿಳಿಸಿದರು.
ಜೆಜೆಎಂ ಹಾಗೂ ಎಂಬಿಎಸ್ ಯೋಜನೆಗಳಿಂದ ಸುಧಾರಣೆ
ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಜಲ ಜೀವನ ಮಿಷನ್ ಯೋಜನೆಗಳ ಅಡಿಯಲ್ಲಿ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ನೀರಿನ ಸಮಸ್ಯೆಯನ್ನು ಸಾಕಷ್ಟು ನಿವಾರಿಸಿವೆ. ಹೊಸದಾಗಿ ಓವರ್ ಹೆಡ್ ಟ್ಯಾಂಕ್ ಗಳ ನಿರ್ಮಾಣ, ಹಳೆಯ ಟ್ಯಾಂಕ್‌ಗಳ ದುರಸ್ತಿ ಹಾಗೂ ಪ್ರಮುಖ ಪೈಪ್‌ಲೈನ್‌ಗಳ ವಿಸ್ತರಣೆಯಿಂದಾಗಿ ಈ ವರ್ಷ ನೀರಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮುಂದಿನ ವರ್ಷಗಳಲ್ಲಿ ಈ ಸಮಸ್ಯೆ ಇನ್ನಷ್ಟು ಬಗೆಹರಿಯಲಿದೆ. ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಸದ ಗೋವಿಂದ ಎಂ. ಕಾರಜೋಳ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿ.ಪಂ.ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರನಾಥ್ ಜೈನ್, ಸಹಾಯಕ ಇಂಜಿನಿಯರ್ ಅಷಮ್ ಪಾಷ್, ತಾಲ್ಲೂಕು ಪಂಚಾಯಿತಿ ಇಓ ಪ್ರಮೋದ್ ಸೇರಿದಂತೆ ಸಂಬAದಪಟ್ಟ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಿಡಿಓಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading