ಚಿತ್ರದುರ್ಗ: ನಗರದ ಎಸ್.ಜೆ.ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಅಂತಿಮ ವರ್ಷದ ಬಿ.ಎ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಂಶಿಕ ಕಿರು ಪ್ರಬಂಧಗಳ ಮೌಖಿಕ ಪರೀಕ್ಷೆಯನ್ನು ಇಂದು ನಡೆಸಲಾಯಿತು.
ಮೌಖಿಕ ಪರೀಕ್ಷೆಯ ಬಾಹ್ಯ ಮೌಲ್ಯಮಾಪಕರಾಗಿ ಡಾ. ಗಾಯಿತ್ರಮ್ಮ ಟಿ. ಭಾಗವಹಿಸಿ, ವಿದ್ಯಾರ್ಥಿಗಳು ಉತ್ತಮ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಮೇಶ್ ಕೆ., “ನೀವು ರಚಿಸಿದ ಕಿರು ಪ್ರಬಂಧಗಳು ಮುಂದೊಂದು ದಿನ ನೆನಪಿನಲ್ಲಿ ಉಳಿಯುವಂತಾಗುತ್ತವೆ. ಇವುಗಳ ರಚನೆಯಿಂದ ಓದಿನ ಪ್ರಾಥಮಿಕ ಮಾಹಿತಿ, ಬರವಣಿಗೆಯ ಸ್ಪಷ್ಟತೆ ಹಾಗೂ ವಿಷಯದ ಗ್ರಹಿಕೆ ದೊರೆಯುತ್ತದೆ. ಒಂದು ವಿಷಯದ ಬಗ್ಗೆ ಆಳವಾದ ಜ್ಞಾನ ಪಡೆಯಲು ಸಹಕಾರಿಯಾಗುತ್ತದೆ. ಮುಂದಿನ ಸಂಶೋಧನಾ ಅಧ್ಯಯನಗಳಿಗೆ ಇದು ನೆರವಾಗಲಿದೆ” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಮಾತನಾಡಿ, “ವಿದ್ಯಾರ್ಥಿಗಳು ಈಗ ಶಿಕ್ಷಣದ ಕೊನೆಯ ಹಂತದಲ್ಲಿದ್ದೀರಿ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೂ ಹಾಗೂ ತಂದೆ-ತಾಯಿಗೂ ಉತ್ತಮ ಹೆಸರು ತಂದುಕೊಡಿ” ಎಂದು ಹಾರೈಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಿ.ಟಿ. ಜಯಣ್ಣ ಮಾತನಾಡಿ, “ವಿದ್ಯಾರ್ಥಿಗಳು ಈಗಿನಿಂದಲೇ ಅಧ್ಯಯನದ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಅನೇಕ ವಿಷಯಗಳು ಇನ್ನೂ ಅಧ್ಯಯನವಾಗದೇ ಅಜ್ಞಾತವಾಗಿವೆ. ಇಂತಹ ನಿರ್ಲಕ್ಷ್ಯಕ್ಕೊಳಗಾದ ಕ್ಷೇತ್ರಗಳಲ್ಲಿ ನಿಮ್ಮ ಸಂಶೋಧನಾ ಅಧ್ಯಯನಗಳು ನಡೆಯಲಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸುಧಾರಾಣಿ ಹಾಗೂ ಡಾ. ಪುಷ್ಪ ಕೆ. ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.