ತುಮಕೂರು: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಧಾರ್ಮಿಕತೆ, ಸೇವಾ ಮನೋಭಾವ ಹಾಗೂ ಸಾಧು-ಸಂತರ ಪರಂಪರೆಯಿಂದ ಪ್ರಸಿದ್ಧಿ ಪಡೆದ ಪ್ರದೇಶವಾಗಿದ್ದು, “ಕಲಿಯುಗದ ದೈವ ಲೋಕ”ವೆಂದು ಭಕ್ತರು ವರ್ಣಿಸುತ್ತಿದ್ದಾರೆ. ಈ ನಾಡಿನಲ್ಲಿ ಅನೇಕ ಮಹನೀಯರು, ಶರಣರು ಹಾಗೂ ಸಮಾಜ ಸೇವಕರು ತಮ್ಮ ಸೇವೆಯಿಂದ ಗುರುತಿಸಿಕೊಂಡಿದ್ದಾರೆ.
ಇಂತಹ ಮಹನೀಯರಲ್ಲಿ ಪೂಜ್ಯ ಜಪಾನಂದಜಿ ಮಹಾರಾಜರು ಪ್ರಮುಖರಾಗಿದ್ದಾರೆ. ಅವರು ಯಾವುದೇ ಪ್ರಚಾರವಿಲ್ಲದೆ ನಿಸ್ವಾರ್ಥ ಸೇವೆಯ ಮೂಲಕ ಗ್ರಾಮೀಣ ಜನತೆ, ಮೂಕ ಪ್ರಾಣಿಗಳು ಹಾಗೂ ಹಕ್ಕಿ-ಪಕ್ಷಿಗಳ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಬರಪೀಡಿತ ಪ್ರದೇಶಗಳಾದ ಶಿರಾ, ಪಾವಗಡ, ಮಧುಗಿರಿ, ಕೊರಟಗೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಜಪಾನಂದಜಿ ಮಹಾರಾಜರು ಉಚಿತ ನೇತ್ರ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ ಅನೇಕ ಬಡ ಜನರಿಗೆ ದೃಷ್ಟಿ ದಾನ ಮಾಡುವ ಮೂಲಕ “ದೃಷ್ಟಿದಾನ ಚಿಂತಾಮಣಿ” ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೆ, ಮೂಕ ಪ್ರಾಣಿಗಳ ಆರೈಕೆ, ಹಕ್ಕಿ-ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.
ಸಮಾಜ ಸೇವೆಯಲ್ಲಿ ತೊಡಗಿರುವ ಅವರ ಸೇವೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ. ಈಗ ರಾಜ್ಯದ ವಿವಿಧ ಭಾಗಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರದ ಜನರು ಅವರ ಸೇವೆಯನ್ನು ಮೆಚ್ಚಿ, ಭಾರತ ಸರ್ಕಾರವು ಜಪಾನಂದಜಿ ಮಹಾರಾಜರಿಗೆ “ಪದ್ಮಶ್ರೀ” ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯರು ಹೇಳುವಂತೆ, ಜಪಾನಂದಜಿ ಮಹಾರಾಜರು “ತನುವು ನಿಮ್ಮದು, ಮನವು ನಿಮ್ಮದು, ಧನವು ನಿಮ್ಮದು” ಎಂಬ ಸೇವಾ ತತ್ವದೊಂದಿಗೆ ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿಕೊಂಡಿದ್ದಾರೆ. ಅವರ ನಿಸ್ವಾರ್ಥ ಸೇವೆ ಇಂದಿನ ಸಮಾಜಕ್ಕೆ ಮಾದರಿಯಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.