April 15, 2026
FB_IMG_1776259169408.jpg

ಚಿತ್ರದುರ್ಗಏ.15:
ಗಂಡು-ಹೆಣ್ಣು ಎಂಬ ಭೇದವಿಲ್ಲದೆ 18 ರಿಂದ 65 ವರ್ಷದೊಳಗಿನ ಆರೋಗ್ಯವಂತರು ನೇತ್ರದಾನ ಮಾಡಬಹುದು. ಒಬ್ಬ ವ್ಯಕ್ತಿ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ತಿಳಿಸಿದರು.

ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪಿ.ಎಚ್.ಸಿ ವ್ಯಾಪ್ತಿಯ ದ್ಯಾಮವ್ವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಜಿಲ್ಲಾ ಆಸ್ಪತ್ರೆ, ಆರೋಗ್ಯ ಇಲಾಖೆ ಹಾಗೂ ಡಾನ್ ಬಾಸ್ಕೋ ಸಂಸ್ಥೆಯ ಎನ್.ಎಸ್.ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೇತ್ರದಾನವು ಅತ್ಯಂತ ಶ್ರೇಷ್ಠ ದಾನವಾಗಿದ್ದು, ಒಬ್ಬರ ನೇತ್ರದಾನವು ಮತ್ತಿಬ್ಬರ ಬಾಳಿಗೆ ಬೆಳಕಾಗುತ್ತದೆ. ಹಾಗೆಯೇ ಅಪಘಾತ ಹಾಗೂ ರಕ್ತಹೀನತೆ ಇರುವ ತಾಯಂದಿರಿಗೆ ತುರ್ತು ಸಂದರ್ಭದಲ್ಲಿ ನಾವು ನೀಡುವ ರಕ್ತವು ಜೀವ ಉಳಿಸಲು ನೆರವಾಗುತ್ತದೆ ಎಂದರು.

ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರೂಪಾ ಮಾತನಾಡಿ, ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂದಿನ ಒತ್ತಡದ ಜೀವನ ಶೈಲಿ, ಜಂಕ್ ಫುಡ್ ಸೇವನೆ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಪೋಷಕಾಂಶಗಳ ಕೊರತೆಯಾಗಿ ರಕ್ತಹೀನತೆ ಉಂಟಾಗುತ್ತಿದೆ. ಪೋಷಕಾಂಶಯುಕ್ತ ಸಮತೋಲಿತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಅರ್ಹರು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಸವರಹಟ್ಟಿ ಪಿ.ಎಚ್.ಸಿ ಆಡಳಿತ ವೈದ್ಯಾಧಿಕಾರಿ ಡಾ. ಬಿ. ಶಿವಕುಮಾರ್ ಮಾತನಾಡಿ, ಎನ್.ಎಸ್.ಎಸ್ ಧ್ಯೇಯವಾಕ್ಯದಂತೆ ‘ನನಗಲ್ಲ ನಿನಗೆ’ ಎನ್ನುವ ಸೇವಾ ಮನೋಭಾವ ಯುವಕರಲ್ಲಿ ಬೆಳೆಯಬೇಕು. ನಮ್ಮಿಂದಲೇ ಸ್ವಚ್ಛತೆ ಆರಂಭವಾಗಲಿ. ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸುವ ಮೂಲಕ ಆರೋಗ್ಯವಂತ ರಾಷ್ಟ್ರ ಕಟ್ಟಲು ಯುವಶಕ್ತಿ ಸನ್ನದ್ಧರಾಗಬೇಕು ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ನೇತ್ರದಾನದ ಬಗ್ಗೆ ಮಾಹಿತಿ ನೀಡಿ, ಕನ್ನಡಕ ಧರಿಸುವವರು, ಮಧುಮೇಹ, ರಕ್ತದೊತ್ತಡ ಹಾಗೂ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಆದವರೂ ನೇತ್ರದಾನ ಮಾಡಬಹುದು. ಆದರೆ ಏಡ್ಸ್ ಹಾಗೂ ಹೆಪಟೈಟಿಸ್ ‘ಬಿ’ ಸೋಂಕಿತರಿಗೆ ನೇತ್ರದಾನಕ್ಕೆ ಅರ್ಹತೆಯಿಲ್ಲ. ಆಸಕ್ತರು ‘ಜೀವ ಸಾರ್ಥಕತೆ’ ವೆಬ್‍ಸೈಟ್‍ನಲ್ಲಿ ನೋಂದಾಯಿಸಬಹುದು. ಮರಣ ಹೊಂದಿದ 6 ಗಂಟೆಯೊಳಗೆ ಮಾಹಿತಿ ನೀಡಿದರೆ ವೈದ್ಯರ ತಂಡ ನೇತ್ರಗಳನ್ನು ಸಂಗ್ರಹಿಸುತ್ತದೆ. ಇದರಿಂದ ದೇಹದ ಯಾವುದೇ ವಿಕಾರತೆಯಾಗುವುದಿಲ್ಲ ಎಂದು ವಿವರಿಸಿದರು.
ಶಿಬಿರದಲ್ಲಿ ಒಬ್ಬ ಮಹಿಳೆ ಸೇರಿದಂತೆ ಒಟ್ಟು 10 ಜನರು ರಕ್ತದಾನ ಮಾಡಿದರು. 23 ಜನರಿಗೆ ನೇತ್ರ ತಪಾಸಣೆ ನಡೆಸಲಾಗಿದ್ದು, 9 ಜನರಿಗೆ ಕಣ್ಣಿನ ಪೊರೆ ಪತ್ತೆಯಾಗಿದೆ. ಇವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲು ಪೂರ್ವಸಿದ್ಧತೆ ನಡೆಸಲಾಗಿದೆ. ಅಲ್ಲದೆ ‘ಆಶಾ ಕಿರಣ’ ಯೋಜನೆಯಡಿ 10 ಜನರಿಗೆ ಕನ್ನಡಕ ವಿತರಿಸಲು ಗುರುತಿಸಲಾಯಿತು. 40 ಹಳೆಯ ರೋಗಿಗಳ ತಪಾಸಣೆ ನಡೆಸಿ ಇಬ್ಬರು ಹೊಸ ರಕ್ತದೊತ್ತಡ ರೋಗಿಗಳಿಗೆ ಚಿಕಿತ್ಸೆ ಪ್ರಾರಂಭಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಧನಕೋಟಿ, ಡಾನ್ ಬಾಸ್ಕೋ ಸಂಸ್ಥೆಯ ಪ್ರಾಧ್ಯಾಪಕರಾದ ಸಾನಿಯಾ, ನಿಮಿಷಾಂಬ, ಗಂಗಾಧರರೆಡ್ಡಿ, ಪ್ರವೀಣ್ ಕುಮಾರ್, ಮಹೇಂದ್ರ, ಪಿಡಿಒ ರಾಜೇಶ್ವರಿ, ನೇತ್ರಾಧಿಕಾರಿ ಕೆ.ಸಿ. ರಾಮು ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಎನ್.ಎಸ್.ಎಸ್ ಶಿಬಿರಾರ್ಥಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading