ಮೊಳಕಾಲ್ಮೂರು: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರವನ್ನು ಆಂಧ್ರಪ್ರದೇಶಕ್ಕೆ ಸೇರಿಸುವ ಅಥವಾ ಚಳ್ಳಕೆರೆ ವಿಧಾನಸಭಾ ಕ್ಷೇತ್ರದೊಂದಿಗೆ ವಿಲೀನಗೊಳಿಸುವ ಕುರಿತು ಕೇಳಿಬರುತ್ತಿರುವ ಹೇಳಿಕೆಗಳನ್ನು ಮೊಳಕಾಲ್ಮೂರು ಕ್ಷೇತ್ರ ವಿಕಾಸ ಸಮಿತಿ ಅಧ್ಯಕ್ಷರು ತೀವ್ರವಾಗಿ ಖಂಡಿಸಿದ್ದಾರೆ.
ಮೊಳಕಾಲ್ಮೂರು ಕ್ಷೇತ್ರವು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಕ್ಷೇತ್ರದ ಜನರು ಹಲವು ದಶಕಗಳಿಂದ ಕರ್ನಾಟಕದ ಅಭಿವೃದ್ಧಿ ಮತ್ತು ಏಕತೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬುದು ಸತ್ಯವಾದರೂ, ಅದಕ್ಕೆ ಪರಿಹಾರವಾಗಿ ಕ್ಷೇತ್ರದ ಗಡಿ ಬದಲಾವಣೆ, ಆಂಧ್ರಪ್ರದೇಶಕ್ಕೆ ಸೇರಿಸುವುದು ಅಥವಾ ಮತ್ತೊಂದು ವಿಧಾನಸಭಾ ಕ್ಷೇತ್ರದೊಂದಿಗೆ ವಿಲೀನಗೊಳಿಸುವಂತಹ ಹೇಳಿಕೆಗಳು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದು ಸಮಿತಿ ತಿಳಿಸಿದೆ.
ಏಳು ಬಾರಿ ಶಾಸಕರಾಗಿ ಜನಪ್ರತಿನಿಧಿಯಾಗಿದ್ದ ಮಾಜಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರಂತಹ ಹಿರಿಯ ರಾಜಕಾರಣಿಯಿಂದ ಇಂತಹ ಹೇಳಿಕೆಗಳು ಬಂದಿರುವುದು ಅತ್ಯಂತ ನೋವುಂಟುಮಾಡಿದೆ ಎಂದು ಸಮಿತಿ ಅಧ್ಯಕ್ಷರು ಹೇಳಿದ್ದಾರೆ.
ಜನರು ತಮ್ಮ ಪ್ರತಿನಿಧಿಗಳಿಂದ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಯೋಜನೆ, ಹೆಚ್ಚಿನ ಅನುದಾನ, ನೀರಾವರಿ, ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೈಗಾರಿಕಾ ಅಭಿವೃದ್ಧಿಯಂತಹ ಬೇಡಿಕೆಗಳಿಗೆ ಪರಿಹಾರ ನಿರೀಕ್ಷಿಸುತ್ತಾರೆ. ಕ್ಷೇತ್ರವನ್ನೇ ಬೇರೆ ರಾಜ್ಯಕ್ಕೆ ಅಥವಾ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ಸೇರಿಸುವ ಮಾತುಗಳನ್ನು ಜನರು ನಿರೀಕ್ಷಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ಮೊಳಕಾಲ್ಮೂರು ಕ್ಷೇತ್ರ ಹಿಂದುಳಿದಿದ್ದರೆ, ‘ಕ್ಷೇತ್ರವನ್ನು ಬದಲಾಯಿಸಿ’ ಎನ್ನುವುದಲ್ಲ; ‘ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಿ’ ಎನ್ನುವುದು ಜನಪ್ರತಿನಿಧಿಯ ಜವಾಬ್ದಾರಿಯುತ ನಿಲುವಾಗಬೇಕು” ಎಂದು ಕ್ಷೇತ್ರ ವಿಕಾಸ ಸಮಿತಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಯನ್ನು ಮೊಳಕಾಲ್ಮೂರು ಕ್ಷೇತ್ರ ವಿಕಾಸ ಸಮಿತಿಯ ವತಿಯಿಂದ ತೀವ್ರವಾಗಿ ಖಂಡಿಸಲಾಗಿದ್ದು, ಕ್ಷೇತ್ರದ ಜನರ ಭಾವನೆಗಳಿಗೆ ಗೌರವ ನೀಡಿ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಕ್ಷೇತ್ರದ ಜನರಿಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಅದೇ ವೇಳೆ, ಕರ್ನಾಟಕ ಸರ್ಕಾರವು ಮೊಳಕಾಲ್ಮೂರು ಕ್ಷೇತ್ರದ ಹಿಂದುಳಿದಿರುವಿಕೆಯನ್ನು ಗಂಭೀರವಾಗಿ ಪರಿಗಣಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸಬೇಕು. ಕುಡಿಯುವ ನೀರು, ನೀರಾವರಿ, ರಸ್ತೆ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಕೈಗಾರಿಕಾ ಕ್ಷೇತ್ರಗಳಿಗೆ ಆದ್ಯತೆ ನೀಡಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸಮಿತಿ ಒತ್ತಾಯಿಸಿದೆ.
About The Author
Discover more from JANADHWANI NEWS
Subscribe to get the latest posts sent to your email.