August 13, 2026
IMG-20260813-WA0468

ನಸಗತಿಹಳ್ಳಿಮಂಜುನಾಥ್ ಹೊಸದುರ್ಗ

ಹೊಸದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಮುಖ್ಯ ಕಾಲುವೆ ಜಾಲದಿಂದ ಬಿಟ್ಟುಹೋಗಿರುವ ಹೊಸದುರ್ಗ, ಸಿರಾ ಹಾಗೂ ಮತ್ತೋಡು ಹೋಬಳಿಗಳ 24 ಕೆರೆಗಳಿಗೆ ನೀರು ಒದಗಿಸಲು ₹220 ಕೋಟಿ ಅಂದಾಜಿನ ವಿಶೇಷ ಏತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಯೋಜನೆಗೆ ಜಲಸಂಪನ್ಮೂಲ ಸಚಿವರಿಂದ ತತ್ವಶಃ ಅನುಮೋದನೆ ದೊರೆತಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರೇಹಳ್ಳಿ ಬ್ಯಾರೇಜ್‌ನಿಂದ 0.25 ಟಿಎಂಸಿ ನೀರನ್ನು ಎತ್ತಿ ಬಿಟ್ಟುಹೋಗಿರುವ ಕೆರೆಗಳಿಗೆ ಪೈಪ್‌ಲೈನ್ ಮೂಲಕ ಹರಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡಿದ್ದು, ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್) ಮಂಡಳಿಯ ಅಂತಿಮ ಮಂಜೂರಾತಿಗೆ ಕಾಯಲಾಗುತ್ತಿದೆ ಎಂದರು.

ಚಿತ್ರದುರ್ಗ ಶಾಖಾ ಕಾಲುವೆಯಡಿ ಹೊಸದುರ್ಗ ತಾಲೂಕಿನ 57 ಹಾಗೂ ಹೊಳಲ್ಕೆರೆ ತಾಲೂಕಿನ 18 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯ ಪೈಪ್‌ಲೈನ್ ಅಳವಡಿಕೆ ಅಂತಿಮ ಹಂತದಲ್ಲಿದೆ. ಬಾಕಿ ಇರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತಲುಪಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ಯೋಜನೆಯಡಿ ₹1,568 ಕೋಟಿ ವೆಚ್ಚದಲ್ಲಿ 36,292 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಯೂ ಜಾರಿಯಲ್ಲಿದೆ ಎಂದು ಹೇಳಿದರು.

ತುಮಕೂರು ಶಾಖಾ ಕಾಲುವೆಯಡಿ ಮತ್ತೋಡು ಮತ್ತು ಸಿರಾ ಹೋಬಳಿಗಳಲ್ಲಿ 13,574 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಹಾಗೂ 24 ಕೆರೆಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ₹411 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಗೋವಿಂದಪ್ಪ ತಿಳಿಸಿದರು.

ಮುಖ್ಯ ಕಾಲುವೆಯಿಂದ ಬಿಟ್ಟುಹೋಗಿರುವ ಕೆರೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಾರೇಹಳ್ಳಿ ಭಾಗದಿಂದ ಏತ ನೀರಾವರಿ ಯೋಜನೆ ರೂಪಿಸಲಾಗಿದೆ. ಇದರಿಂದ ಶ್ರೀರಾಮಪುರ ಹೋಬಳಿಯ 9 ಹಾಗೂ ಮತ್ತೋಡು ಹೋಬಳಿಯ 15 ಕೆರೆಗಳು ಸೇರಿದಂತೆ ಒಟ್ಟು 24 ಕೆರೆಗಳಿಗೆ ನೀರು ದೊರೆಯಲಿದೆ ಎಂದರು.

ಇದಲ್ಲದೆ ಲಕ್ಕಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಲಕ್ಕಿಹಳ್ಳಿ, ಶ್ರೀರಾಮನಹಳ್ಳಿ, ಅಜ್ಜಿಬೋರನಹಳ್ಳಿ, ಮಾದೇನಹಳ್ಳಿ ಸೇರಿದಂತೆ ಭದ್ರಾ ಯೋಜನೆಯ ಮೂಲ ನೀಲನಕ್ಷೆಯಿಂದ ಬಿಟ್ಟುಹೋಗಿರುವ ಮತ್ತಷ್ಟು ಕೆರೆಗಳಿಗೆ ವೇದಾವತಿ ನದಿಯ ಹಿನ್ನೀರಿನಿಂದ ನೀರು ಎತ್ತಿ ತುಂಬಿಸುವ ವಿಶೇಷ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಒಂದು ವಾರದಲ್ಲಿ ತುಮಕೂರು ಶಾಖಾ ಕಾಲುವೆ ಕಾಮಗಾರಿ ಪುನರಾರಂಭ

ತರೀಕೆರೆ ಹಾಗೂ ಕಡೂರು ತಾಲೂಕುಗಳಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಸ್ಥಗಿತಗೊಂಡಿದ್ದ ತುಮಕೂರು ಶಾಖಾ ಕಾಲುವೆ ಕಾಮಗಾರಿಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲಾಗಿದ್ದು, ನ್ಯಾಯಾಲಯದ ಅನುಮೋದನೆಯೂ ದೊರೆತಿದೆ. ಒಂದು ವಾರದೊಳಗೆ ಕಾಮಗಾರಿ ಪುನರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕಂದಾಯ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತರಿಂದ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ನಿಯಮಾನುಸಾರ ಸುಮಾರು ₹99 ಲಕ್ಷದಿಂದ ₹1 ಕೋಟಿ ಪರಿಹಾರ ಅನುದಾನ ಬಿಡುಗಡೆಯಾಗಿದ್ದು, ಈ ವಾರದಲ್ಲೇ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ ಎಂದು ಹೇಳಿದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳು, ಕಾಲುವೆಗಳು ಹಾಗೂ ಸೇತುವೆಗಳ ದುರಸ್ತಿಗೆ ₹125 ಕೋಟಿ ಅಂದಾಜಿನ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಲಸಂಪನ್ಮೂಲ ಸಚಿವರ ಅನುಮತಿ ದೊರೆತಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಮಂಡಳಿ ಸಭೆಯಲ್ಲಿ ಅಂತಿಮ ಅನುಮೋದನೆ ಪಡೆದು ಅನುದಾನ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದರು.

ಆಗಸ್ಟ್ 17ರ ನಂತರ ಸಚಿವರು ಮೇಲ್ಭದ್ರಾ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಲಿದ್ದು, ನಂತರ ನೀರು ಹರಿಸುವ ದಿನಾಂಕವನ್ನು ಅಧಿಕೃತವಾಗಿ ಖಚಿತಪಡಿಸಲಾಗುವುದು. ಸುಮಾರು ಆಗಸ್ಟ್ 21ರ ವೇಳೆಗೆ ನೀರು ಹರಿಸುವ ನಿರೀಕ್ಷೆಯಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.

ಈ ವೇಳೆ ಕೆಪಿಸಿಸಿ ಸದಸ್ಯ ಎಂ.ಪಿ.ಶಂಕರ್, ಟಿಎಪಿಸಿಎಂಸಿ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ನಗರ ಕಾಂಗ್ರೆಸ್ ಅಧ್ಯಕ್ಷ ಆಗ್ರೋ ಶಿವಣ್ಣ, ಜಿ.ಪಂ. ಮಾಜಿ ಸದಸ್ಯ ರಾಜಣ್ಣ, ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಹಮದ್ ಇಸ್ಮಾಯಿಲ್, ಮುಖಂಡ ಮುದ್ದಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading