ಚಳ್ಳಕೆರೆ: ನೀರಾವರಿ ಹೋರಾಟ ಸಮಾವೇಶ, ಹಸಿರು ಶಾಲು ದೀಕ್ಷೆ*
ಚಳ್ಳಕೆರೆ: ತಾಲ್ಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ಸೋಮವಾರ ನೀರಾವರಿ ಹೋರಾಟ ಸಮಾವೇಶ, ಹಸಿರು ಶಾಲು ದೀಕ್ಷೆ ಹಾಗೂ ರೈತಸಂಘ ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೈತಮುಖಂಡ ಗುರುಸ್ವಾಮಿ ಮಾತನಾಡಿ, ಬರಗಾಲ ಕೇವಲ ಒಂದು ವರ್ಷವಲ್ಲ, ಅದರ ದುಷ್ಪರಿಣಾಮ ಮೂರು ವರ್ಷ ಇರುತ್ತದೆ. ಕೃಷಿಕರು, ಕೂಲಿಗಾರರು ನಿಷ್ಠೆ ಬೆಳೆಸಿಕೊಳ್ಳಬೇಕು. ಬೆಳೆಗೆ ಬೆಲೆ ನಿಗದಿ ಅಧಿಕಾರ ಗಳಿಸಬೇಕು. ಸಿಂಹಘರ್ಜನೆ ಆಗಬೇಕು. ಇಬ್ಭಾಗ ಆಗಿರುವ ಎಲ್ಲರೂ ಒಗ್ಗೂಡಬೇಕು. ಬೆಲೆ ನಿಗದಿ ಶಕ್ತಿ ಪಡೆಯುವವರೆಗೆ ರೈತನ ಉದ್ಧಾರ ಆಗಲ್ಲ. ಭೂಮಿಗೆ ವಿಷ ಹಾಕ್ತಾ ಇದ್ದೇವೆ ಎಂದರು.
ಸಮಾವೇಶ ಉದ್ಘಾಟಿಸಿದ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ, ಕೃಷಿ ದೇಶದ ಶಕ್ತಿ. ಆದರೆ, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅನ್ನದಾತ ಬೀದಿಗಿಳಿದರೇ ಸರ್ಕಾರ ಬೆದರುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಮೋದಿ ಘೋಷಿಸಿದ್ದರು, ರಾಷ್ಟ್ರೀಯ ಯೋಜನೆ ಮಾಡಲಾಗುವುದು ಎಂದು ಹೇಳಿದ್ದರು. ಜೊತೆಗೆ ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಬಿಡಿಗಾಸು ನೀಡಿಲ್ಲ. ಕ್ಷಮೆಗೆ ಅರ್ಹರಲ್ಲ. ಇಲ್ಲಿಯವರೆಗೂ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಬಂಗಾರದ ಬೆಳೆಗೆ ನಮ್ಮ ಭೂಮಿ ಅರ್ಹವಾಗಿದೆ. ಇದಕ್ಕಾಗಿ ನೀರು, ಜೊತೆಗೆ ಬೆಳೆಗೆ ವೈಜ್ಞಾನಿಕ ಬೆಲೆ ಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುವಂತೆ ಒತ್ತಡ ತರಬೇಕಿದೆ. ರೈತರು ಬೀದಿಗಿಳಿದು ಹೋರಾಟ ನಡೆಸಬೇಕಿದೆ. ಕೃಷಿ ಬಿಕ್ಕಟ್ಟಿಗೆ ಸಿಲುಕಿದೆ. ಬೆಂಬಲ ಬೆಲೆ ನಾಟಕ. ಕೇಂದ್ರ ಬಾಗಿಲು ಹಾಕಿರುತ್ತದೆ. ಕೃಷಿಕ ಮತ್ತು ಗ್ರಾಹಕರ ಮಧ್ಯೆ ಅಜಾಗಜಾಂತರ. ಕೈ ಬದಲು ಮಾಡುವ ಮಂದಿಗೆ ಲಾಭ. ಜಪ್ತಿ ನಿಲ್ಲಬೇಕು. ಆತ್ಮಹತ್ಯೆ ನಿಲ್ಲಬೇಕು. ಸೂಕ್ಷ್ಮತೆ, ಮಾನವೀಯತೆ ಹೆಚ್ಚಬೇಕು. ಅಸಹಾಯಕನನ್ನಾಗಿಸಬಾರದು. ರಾಜಕಾರಣಿಗಳು ಕೊಟ್ಟ ಮಾತು ಉಳಿಸಿಕೊಳ್ಳಬೇಕು. ರೈತಸಂಘಗಳು ಒಗ್ಗೂಡಬೇಕು. ಒಡಕು ಕೈಬಿಟ್ಟು ಧ್ವನಿ ಮೊಳಗಿಸಿದರೇ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡಲಿದೆ ಎಂದರು.
ಹಸಿರು ಶಾಲು ದೀಕ್ಷೆ ನೀಡಿದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಹಸಿರು ಶಾಲು ಬಹಳ ಮಹತ್ವದ್ದಾಗಿದೆ. ರೈತಸಂಘದ ಘನತೆ ಹೆಚ್ಚಿಸಬೇಕು. ಆಗ ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಶಕ್ತಿ ಬರಲಿದೆ. ಅನೇಕ ರೈತರು ಜೀವ ಕೊಟ್ಟಿದ್ದಾರೆ. ಭ್ರಷ್ಟಾಚಾರ ವ್ಯಾಪಿಸಿದೆ. ರೈತರು ಮಾತ್ರ ಸಾಲದ ಸಿಲುಕಿದ್ದಾರೆ. ನಮ್ಮ ಆಸ್ತಿ ಅಡಮಾನ, ಜೊತೆಗೆ ಜಾಮೀನುದಾರ. ಎಲ್ಲರಿಗೂ ರೈತರಿಗೆ ಮೋಸ. ದೇಶದ ಕೆಲವೇ ವ್ಯಕ್ತಿಗಳ ಕೈಲಿ ಸಂಪತ್ತು ಕೇಂದ್ರೀಕರಿಸಲಾಗಿದೆ. ನೀರು ನನ್ನ ಹಕ್ಕು. ಅದನ್ನು ಕೊಡಲೇಬೇಕು. ಬದುಕಲು ಹೋರಾಡಬೇಕು ಎಂದರು.
ನರೇನಹಳ್ಳಿ ಅರುಣಕುಮಾರ್ ಮಾತನಾಡಿ, ರೈತ ಕೈಕಟ್ಟಿ ಕುಳಿತರೇ ಜಗತ್ತು ನಾಶ. 25 ವರ್ಷದ ಹೋರಾಟದ ಫಲ ಭದ್ರೆ ನೀರು ಜಿಲ್ಲೆಗೆ ಬಂದಿದೆ. ಮೊಳಕಾಲ್ಮೂರು, ಚಳ್ಳಕೆರೆ ಭಾಗಕ್ಕೆ ಮೊದಲು ನೀರು ಕೊಡಬೇಕು. ಸಮಗ್ರ ನೀರಾವರಿಗಾಗಿ ಹೋರಾಟ ತೀವ್ರಗೊಳ್ಳಬೇಕು ಎಂದರು.
ಕೆ.ಸಿ.ಗೌಡ ಮಾತನಾಡಿ, ಸಿದ್ದರಾಮಯ್ಯ ಅಂತಹವರಿಗೆ ಗುರು ಎಂಡಿಎನ್. ಶಾಲು ಸ್ವಾಭಿಮಾನ, ಹೋರಾಟದ ಸಂಕೇತ. ನ್ಯಾಯ ಬೇಕು. ಭರವಸೆ ಬೇಡ. ಅನುಕಂಪ, ಭಿಕ್ಷೆ ಬೇಡ ಎಂದರು.
ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ, ನಾವು ಏನು ಕೇಳಲಿಲ್ಲ. ಆದ್ರೆ ನೀವೇ 5,300 ಕೋಟಿ ಘೋಷಿಸಿದ್ರಿ, ರಾಷ್ಟ್ರೀಯ ಯೋಜನೆ ಮಾಡುವುದಾಗಿ ಮೋದಿ ಘೋಷಿಸಿದ್ದು, ಆದರೆ ಇಲ್ಲಿಯವರೆಗೆ ಹಣ ಕೊಡ್ತಿಲ್ಲ. ಮೋಸ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕು ಎಂದರು.
ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ, ಬರಗಾಲ, ಬಡತನಕ್ಕೆ ಸರ್ಕಾರಗಳು ಕಾರಣ. ಸಂಸದರು ಬಾಯಿ ಬಿಡುತ್ತಿಲ್ಲ. ಧೈರ್ಯ ಪ್ರದರ್ಶಿಸಬೇಕು. 5,300 ಕೋಟಿ ಇಲ್ಲಿಯವರೆಗೆ ಕೊಟ್ಟಿಲ್ಲ. ವಿಳಂಬ ಮಾಡಿದ್ದರಿಂದ 10,600 ಕೋಟಿ ಕೊಡಬೇಕು ಎಂದರು.
ಬಸವದಳ ರಾಜ್ಯಾಧ್ಯಕ್ಷ ವೀರೇಶ್ ಮಾತನಾಡಿ, ವಿಶ್ವದ ಪ್ರಮುಖ ಪ್ರಜೆ ಅನ್ನದಾತ. ಶರಣಧರ್ಮ ಜನಕರು ರೈತರು ಎಂದರು.
ಜಾಫರ್ ಷರೀಫ್ ಮಾತನಾಡಿ, ವ್ಯಾಪಾರೀಕರಣ ಮಾಡಲಾಗುತ್ತಿದೆ. ಶಿಕ್ಷಣ ಎಲ್ಲವೂ ವ್ಯಾಪಾರ ಆಗಿದೆ. ರಾಜ ವ್ಯಾಪಾರಿ, ಜನ ಬಿಕಾರಿ ಅಂತೇ. ರೈತರನ್ನು ಕತ್ತಲಲ್ಲಿಟ್ಟರೇ, ಅಧಿಕಾರ ಗಟ್ಟಿ ಎಂದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ರೈತಸಂಘದ ಸದಸ್ಯ ಒಂಟಿ ಅಲ್ಲ ಎಂದರು.
ನಂತರ ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಕೆ.ಕರಿಯಣ್ಣ ಸ್ವಾಗತಿಸಿದರು. ಚಂದ್ರಣ್ಣ, ಟಿ.ಚಂದ್ರಪ್ಪ, ರವಿಕುಮಾರ್ ಮರ್ಲಹಳ್ಳಿ, ಡಿ.ಸಿ.ನಾಗರಾಜ್, ವೀರೇಶ್, ನರೇನಹಳ್ಳಿ ಅರುಣಕುಮಾರ್, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಜಾಫರ್ ಷರೀಫ್, ರಾಜಶೇಖರ್ ನಾಯ್ಕ, ಪ್ರಶಾಂತ ನಾಯಕ, ಜೋಗಿಮಟ್ಟಿ ಮಹೇಶಬಾಬು, ಹಿರೇಹಳ್ಳಿ ರಾಜಣ್ಣ, ಆರ್.ರುದ್ರಮುನಿ, ಟಿ.ರಾಮಸ್ವಾಮಿ, ಮೀಸೆ ತಿಪ್ಪೇಸ್ವಾಮಿ, ಕೆರೆಯಾಗಲಹಳ್ಳಿ ವೀರಣ್ಣ, ಎಲೆಯಾರ್ ತಿಪ್ಪೇಸ್ವಾಮಿ, ಸೂರಮ್ಮನಹಳ್ಳಿ ರಾಜಣ್ಣ, ಎದ್ಲು ತಿಪ್ಪೇಸ್ವಾಮಿ, ಕೆ.ಓ.ತಿಪ್ಪೇಸ್ವಾಮಿ, ರುದ್ರಮ್ಮನಹಳ್ಳಿ ಓಬಣ್ಣ ಇತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.
