ಚಳ್ಳಕೆರೆ: ಅಬಾಕಸ್ ಶಿಕ್ಷಣವು ಮಕ್ಕಳ ಏಕಾಗ್ರತೆ, ಬೌದ್ಧಿಕ ಬೆಳವಣಿಗೆ, ಆತ್ಮವಿಶ್ವಾಸ ಹಾಗೂ ಗಣಿತ ಸಾಮರ್ಥ್ಯವನ್ನು ಹೆಚ್ಚಿಸುವ ಕೌಶಲ್ಯವಾಗಿದ್ದು, ಶಾಲಾ ಪಠ್ಯಕ್ರಮದ ಒಂದು ಭಾಗವಾಗಿ ಅಬಾಕಸ್ ಶಿಕ್ಷಣವನ್ನು ಅಳವಡಿಸುವ ಅಗತ್ಯವಿದೆ ಎಂದು ಡಾ. ಶಿವಲಿಂಗಪ್ಪ ಮೀರಸಾಬಿಹಳ್ಳಿ ಹೇಳಿದರು.
ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಸೆ. 6ರಂದು ಅಕ್ಷರ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ ಹಾಗೂ ಪದವಿ ಪ್ರದಾನ ಸಮಾರಂಭ-2026 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಅಕಾಡೆಮಿಯ ಸಂಸ್ಥೆಯ ಮಾರ್ಗದರ್ಶಕ ಎಂ. ಗೋವಿಂದರಾಜುಲು ಹಾಗೂ ಸಂಸ್ಥಾಪಕಿ, ಶಿಕ್ಷಕಿ ಮಮತಾ ರಾಘವೇಂದ್ರ ಅವರೊಂದಿಗೆ ವೇದಿಕೆ ಹಂಚಿಕೊಂಡ ಡಾ. ಶಿವಲಿಂಗಪ್ಪ ಮೀರಸಾಬಿಹಳ್ಳಿ ಅವರು ಅಬಾಕಸ್ ಮಣಿಚೌಕಟ್ಟಿನಲ್ಲಿ ಮಣಿಗಳನ್ನು ಜರಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಣಿತ ವಿಷಯವು ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಂತಾಗದೆ, ಅಬಾಕಸ್ ತರಬೇತಿಯ ಮೂಲಕ ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ. ಅಬಾಕಸ್ ಅಭ್ಯಾಸವು ಮಕ್ಕಳಲ್ಲಿ ಏಕಾಗ್ರತೆ ಮತ್ತು ವೇಗವಾಗಿ ಲೆಕ್ಕಾಚಾರ ಮಾಡುವ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು.
ನಂತರ ಅಬಾಕಸ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಪದವಿ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಕ್ಷರ ಅಕಾಡೆಮಿಯ ಸಂಸ್ಥಾಪಕಿ ಹಾಗೂ ಶಿಕ್ಷಕಿ ಮಮತಾ ರಾಘವೇಂದ್ರ ಮಾತನಾಡಿ, ಸಂಸ್ಥೆಯ ಅಭಿವೃದ್ಧಿ ಹಾಗೂ ಮುಂದಿನ ದಿನಗಳಲ್ಲಿ ಆರಂಭಿಸಲಾಗುವ ಹೊಸ ತರಗತಿಗಳ ಕುರಿತು ಮಾಹಿತಿ ನೀಡಿದರು. ಮಕ್ಕಳ ದಿನನಿತ್ಯದ ಚಟುವಟಿಕೆಗಳಲ್ಲಿ ಅಬಾಕಸ್ ಶಿಕ್ಷಣವನ್ನು ಅಳವಡಿಸುವುದರಿಂದ ಅವರ ಬೌದ್ಧಿಕ ಬೆಳವಣಿಗೆ ವೇಗಗೊಳ್ಳುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ರಾಘವೇಂದ್ರ ಗುಪ್ತ, ರವಿ ಕುಮಾರ್, ಯಶವಂತ್, ಲಕ್ಷ್ಮಿ, ವಂಶಿಕೃಷ್ಣ, ಸುಮ, ಭುವನ ಸೇರಿದಂತೆ ಅಕಾಡೆಮಿಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.



About The Author
Discover more from JANADHWANI NEWS
Subscribe to get the latest posts sent to your email.