May 2, 2026
IMG-20260502-WA0141.jpg

ಸಾಣೇಹಳ್ಳಿ, ಮೇ 2: ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ರಂಗಭೂಮಿಯ ಪಾತ್ರ ಅನನ್ಯವಾಗಿದ್ದು, ಕಳೆದ 29 ವರ್ಷಗಳಿಂದ ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಕೊಂಡಿರುವ ಶಿವಸಂಚಾರ ತಂಡದ ಕಾರ್ಯ ಶ್ಲಾಘನೀಯ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಶಿವಸಂಚಾರ ಕಲಾವಿದರ ಬೀಳ್ಕೊಡುಗೆ ಸಮಾರಂಭ ಹಾಗೂ ಔತಣಕೂಟದಲ್ಲಿ ಮಾತನಾಡಿದ ಅವರು, “ನಾಟಕಗಳ ಮೂಲಕ ಸಮಾಜದ ಮೇಲೆ ಬೀರುವ ಸಕಾರಾತ್ಮಕ ಪ್ರಭಾವವೇ ನಮಗೆ ದೊರೆತ ಅತಿದೊಡ್ಡ ಯಶಸ್ಸು. ‘ಶಿವಸಂಚಾರ’ ಮತ್ತು ‘ರಂಗಶಾಲೆ’ ತಮ್ಮದೇ ಆದ ಛಾಪು ಮೂಡಿಸಿ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ” ಎಂದರು.
1997ರಲ್ಲಿ ರಂಗ ನಿರ್ದೇಶಕ ಸಿ.ಜಿ. ಕೃಷ್ಣಸ್ವಾಮಿ ಅವರ ನೇತೃತ್ವದಲ್ಲಿ ಆರಂಭವಾದ ಶಿವಸಂಚಾರ ತಂಡವು ಸಾಮಾಜಿಕ ಬದಲಾವಣೆಯ ಆಶಯದೊಂದಿಗೆ ನಾಡಿನಾದ್ಯಂತ ಸಂಚರಿಸುತ್ತಿದೆ. ಆರಂಭಿಕ ದಿನಗಳಲ್ಲಿ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಕಲಾವಿದರೊಂದಿಗೆ ನೆಲದ ಮೇಲೆ ಮಲಗಿ, ಒಲೆ ಹಚ್ಚಿ ನೀರು ಕಾಯಿಸುವ ಮಟ್ಟಿಗೆ ತೊಡಗಿಸಿಕೊಂಡಿದ್ದ ಸಿಜಿಕೆ ಅವರ ತ್ಯಾಗವನ್ನು ಸ್ವಾಮೀಜಿ ಸ್ಮರಿಸಿದರು.
ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಂಕಷ್ಟ ಸೇರಿದಂತೆ ಹಲವು ಸವಾಲುಗಳ ನಡುವೆಯೂ ರಾಘು ಮತ್ತು ಅವರ ಪತ್ನಿಯ ಧೈರ್ಯದಿಂದ ಶಿವಸಂಚಾರ ಮುಂದುವರಿದಿದ್ದು, ಈ ವರ್ಷದ ತಿರುಗಾಟ ತಂಡದ ಇತಿಹಾಸದಲ್ಲೇ ಅತಿ ಹೆಚ್ಚು ಯಶಸ್ಸು ಕಂಡಿದೆ ಎಂದು ಹೇಳಿದರು.
ತಂಡದ ವ್ಯವಸ್ಥಾಪಕರಾದ ಚಂದ್ರಮ್ಮ ಮತ್ತು ನಾಗರತ್ನಮ್ಮ ಅವರ ಶ್ರಮವನ್ನು ಮೆಚ್ಚಿದ ಅವರು, “ಕಲೆಗೆ ಸಾವಿಲ್ಲ. ಕಲಾವಿದರಿಗೆ ಸದಾ ಪ್ರೋತ್ಸಾಹ ಅಗತ್ಯ. ಶಿವಸಂಚಾರದಿಂದ ಹೊರಬಂದ ಕಲಾವಿದರು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಲಿ” ಎಂದು ಹಾರೈಸಿದರು.
ರಂಗ ನಿರ್ದೇಶಕ ವೈ.ಡಿ. ಬದಾಮಿ ಮಾತನಾಡಿ, ಕಳೆದ 29 ವರ್ಷಗಳಿಂದ ಶಿವಸಂಚಾರ ತನ್ನ ಸಾಂಸ್ಕೃತಿಕ ಬದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಈ ವರ್ಷ ತಾಂತ್ರಿಕ ಸವಾಲುಗಳನ್ನು ಮೀರಿ ತಂಡ ಅತ್ಯಂತ ಯಶಸ್ವಿಯಾಗಿ ನಾಟಕ ಪ್ರದರ್ಶನಗಳನ್ನು ನೀಡಿದೆ ಎಂದು ಹೇಳಿದರು.
ರಂಗಶಾಲೆಯ ಪ್ರಾಂಶುಪಾಲ ರಘು ಪರಪ್ಪಮನೆ ಮಾತನಾಡಿ, “ಸಂಸ್ಥೆಯ ಗೌರವವೇ ಮುಖ್ಯ. ಈ ವರ್ಷದ ತಿರುಗಾಟದಲ್ಲಿ ಕಲಾವಿದರು ತೋರಿದ ಶಿಸ್ತು ಮತ್ತು ಬದ್ಧತೆ ಸಂಸ್ಥೆಯ ಘನತೆಯನ್ನು ಹೆಚ್ಚಿಸಿದೆ” ಎಂದು ಸಂತಸ ವ್ಯಕ್ತಪಡಿಸಿದರು.
ರಂಗ ನಿರ್ದೇಶಕ ಕೃಷ್ಣಮೂರ್ತಿ ತಾಳಿಕಟ್ಟೆ ಮಾತನಾಡಿ, “ರಂಗಭೂಮಿ ಕೇವಲ ಮನರಂಜನೆಯ ಸಾಧನವಲ್ಲ; ಅದು ಪ್ರೀತಿ ಮತ್ತು ಮನುಷ್ಯತ್ವವನ್ನು ಬೆಸೆಯುವ ಪವಿತ್ರ ತಾಣ” ಎಂದರು.
ಕಾರ್ಯಕ್ರಮದಲ್ಲಿ ಶಿವಸಂಚಾರ ತಂಡದ ಕಲಾವಿದರು ತಮ್ಮ ಅನುಭವಗಳನ್ನು ಹಂಚಿಕೊಂಡು ಭಾವುಕರಾದರು. ಒಂದು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿದ ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading