ಬೆಂಗಳೂರು, ಮೇ 3:
ಮಾದಿಗ ಸಮುದಾಯದ 30 ವರ್ಷಗಳ ನಿರಂತರ ಹೋರಾಟ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿರುವುದನ್ನು ಸ್ವಾಗತಿಸಿದ ಮಾದಿಗರ ಚಿಂತಕರ ದುಂಡು ಮೇಜಿನ ಸಭೆ, ಅದರ ಅನುಷ್ಠಾನದಲ್ಲಿ ಕಂಡುಬಂದಿರುವ ಸಣ್ಣಪುಟ್ಟ ಲೋಪಗಳನ್ನು ತಕ್ಷಣ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದೆ.

ಭಾನುವಾರ ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವರು, ಮಾಜಿ ಸಂಸದರು, ನಿವೃತ್ತ ಅಧಿಕಾರಿಗಳು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಚಿಂತಕರು ಭಾಗವಹಿಸಿ ಒಳಮೀಸಲಾತಿ ಅನುಷ್ಠಾನದ ಕುರಿತಾಗಿ ಸುದೀರ್ಘ ಚರ್ಚೆ ನಡೆಸಿದರು.
ಸಭೆಯಲ್ಲಿ ವಿಶೇಷವಾಗಿ, ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ಹುದ್ದೆಗಳ ಸಂಖ್ಯೆ 3ಕ್ಕಿಂತ ಕಡಿಮೆ ಇದ್ದಲ್ಲಿ ಅವುಗಳನ್ನು “ಎಸ್ಸಿ ಸಾಮಾನ್ಯ” ಎಂದು ಪರಿಗಣಿಸುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು. ಜೊತೆಗೆ ರೋಸ್ಟರ್ ಬಿಂದುವಿನಲ್ಲಿರುವ ದೋಷಗಳನ್ನು ಸರಿಪಡಿಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಹಿಸಬೇಕು ಎಂದು ಒತ್ತಾಯಿಸಲಾಯಿತು.
ಕರ್ನಾಟಕ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿರುವುದರಿಂದ ಒಳಮೀಸಲಾತಿ ನೀತಿ ಒಂದೇ ಮಾದರಿಯಲ್ಲಿ ಜಾರಿಯಾಗಬೇಕು. ತೆಲಂಗಾಣ ಮಾದರಿಯ ಒಳಮೀಸಲಾತಿ ನೀತಿಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕು ಎಂದು ಸಭೆ ಅಭಿಪ್ರಾಯಪಟ್ಟಿತು.
ರಾಜ್ಯದಲ್ಲಿ ಆದಿಕರ್ನಾಟಕ, ಆದಿದ್ರಾವಿಡ ಹಾಗೂ ಆದಿಆಂಧ್ರ ಜಾತಿ ಸೂಚಕದಡಿ ಮಾದಿಗರು ಮತ್ತು ಛಲವಾದಿಗರು ಪ್ರಮಾಣಪತ್ರ ಪಡೆಯುತ್ತಿರುವ ಹಿನ್ನೆಲೆ, ಪ್ರಸ್ತುತ ಮಾಡಿರುವ ಎ, ಬಿ, ಸಿ ವರ್ಗೀಕರಣದಲ್ಲಿ ವರ್ಗ–1 ಗುಂಪಿಗೆ ಅನಧಿಕೃತ ಪ್ರವೇಶವಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಭೆ ನಿರ್ಣಯ ಕೈಗೊಂಡಿತು.
ಒಳಮೀಸಲಾತಿ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಹೋರಾಟದ ಅಗತ್ಯವಿಲ್ಲದಿದ್ದರೂ, ಅದರ ಅನುಷ್ಠಾನದಲ್ಲಿ ಉಂಟಾಗುವ ಲೋಪಗಳು ಮತ್ತು ವರ್ಗ–1ಕ್ಕೆ ಅನಧಿಕೃತ ನುಸುಳುವಿಕೆ ತಡೆಯುವ ಉದ್ದೇಶದಿಂದ “ಮಾದಿಗರ ಒಳಮೀಸಲಾತಿ ಸಂರಕ್ಷಣಾ ಸಮಿತಿ” ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಗೌರವಾಧ್ಯಕ್ಷರಾಗಿ ಡಾ. ಎಲ್. ಹನುಮಂತಯ್ಯ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸುವ ಅಧಿಕಾರವನ್ನು ಎಚ್. ಆಂಜನೇಯ ಅವರಿಗೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ಆಂಜನೇಯ, “ಯಾರೊಂದಿಗೂ ಸ್ಪರ್ಧೆ ಮಾಡಲು ಸಾಧ್ಯವಿಲ್ಲದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿರುವುದರಿಂದಲೇ ಮಾದಿಗರು ಒಳಮೀಸಲಾತಿಗಾಗಿ ಹೋರಾಟ ನಡೆಸಿದ್ದಾರೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದುಳಿದಿರುವ ಸಮುದಾಯಕ್ಕೆ ಸಂಪೂರ್ಣ ಒಳಮೀಸಲಾತಿ ಜಾರಿಯಾದಾಗ ಮಾತ್ರ ನ್ಯಾಯ ಸಿಗಲಿದೆ” ಎಂದು ಹೇಳಿದರು.
ಪರಿಶಿಷ್ಟ ಜಾತಿಯಲ್ಲಿಯೇ ಸಿಂಹಪಾಲು ಜನಸಂಖ್ಯೆ ಹೊಂದಿದ್ದರೂ ಬಡತನ ಮತ್ತು ಸಂಕಷ್ಟಗಳಿಂದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಬೇಡಿಕೆಗೆ ನ್ಯಾಯ ಒದಗಿಸಿದ್ದಾರೆ. ಆದರೆ ಕೆಲವು ತಾಂತ್ರಿಕ ಲೋಪಗಳನ್ನು ಸರಿಪಡಿಸಿದರೆ ಇನ್ನಷ್ಟು ಸಹಕಾರವಾಗಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಗಿಡಕ್ಕೆ ನೀರೇರಿಸುವ ಮೂಲಕ ಉದ್ಘಾಟಿಸಿದರು. ಸಭೆಯಲ್ಲಿ ಮಾಜಿ ಸದಸ್ಯ ಎಚ್. ದುಗ್ಗಪ್ಪ, ಡಾ. ಎಲ್. ಹನುಮಂತಯ್ಯ, ಬಾಬುರಾವ್ ಮುಡಬಿ, ಎಚ್.ಆರ್. ತೇಗನೂರು, ದಾಸನೂರು ಕೂಸಣ್ಣ, ಮಂಜುನಾಥ್ ಹೊಣಿಕೇರಿ, ಸುಮಂತ್ ಕಟ್ಟಿಮನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.