ಸಾಣೇಹಳ್ಳಿ: ಮೇ 10: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಹಾಗೂ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ D. Sudhakar ಅವರ ಅಕಾಲಿಕ ನಿಧನಕ್ಕೆ ಸಾಣೇಹಳ್ಳಿಯ Panditaradhya Shivacharya Swamiji ತೀವ್ರ ಸಂತಾಪ ಸೂಚಿಸಿದ್ದಾರೆ.




ಶ್ರೀಗಳು ಮಾತನಾಡಿ, ಡಿ. ಸುಧಾಕರ್ ಅವರು ಶಾಸಕರಾಗಿದ್ದ ಕಾಲದಿಂದಲೇ ಸಾಣೇಹಳ್ಳಿ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಸ್ಮರಿಸಿದರು. ಮಠದಲ್ಲಿ ನಡೆಯುವ ಪ್ರತಿಯೊಂದು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಎಷ್ಟೇ ಒತ್ತಡದ ಪರಿಸ್ಥಿತಿಯಲ್ಲಿದ್ದರೂ ಫೋನ್ ಕರೆಗೆ ತಕ್ಷಣ ಸ್ಪಂದಿಸುವ ಅವರ ಗುಣ ಅಪರೂಪದ್ದು ಎಂದು ಹೇಳಿದರು.
“ಸುಧಾಕರ್ ಅವರು ಸಾತ್ವಿಕ ಮನೋಭಾವದ ರಾಜಕಾರಣಿಯಾಗಿದ್ದರು. ಕಳೆದ ವರ್ಷದ ನಾಟಕೋತ್ಸವದಲ್ಲಿ ಭಾಗವಹಿಸಿ ಅತ್ಯಂತ ಅರ್ಥಪೂರ್ಣವಾಗಿ ಮಾತನಾಡಿದ್ದರು. ‘ಮಾತು ಕಡಿಮೆ, ಕೆಲಸ ಜಾಸ್ತಿ’ ಎಂಬ ತತ್ವಕ್ಕೆ ಅವರು ಅನ್ವರ್ಥರಾಗಿದ್ದರು,” ಎಂದು ಶ್ರೀಗಳು ತಿಳಿಸಿದ್ದಾರೆ.
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಅವರು ಸಲ್ಲಿಸಿದ ಸೇವೆ ಅಪಾರವಾಗಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ಜನಮನದಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದರು ಎಂದು ಪ್ರಶಂಸಿಸಿದರು.
“ಸುಧಾಕರ್ ಅವರು ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ಅಗತ್ಯವಿತ್ತು. ಕಳೆದ ತಿಂಗಳು ಅವರು ಆಸ್ಪತ್ರೆಗೆ ದಾಖಲಾದಾಗ ಅವರ ಆರೋಗ್ಯದ ಬಗ್ಗೆ ವಿಚಾರಿಸಲಾಗಿತ್ತು. ಆದರೆ ಅವರು ಇಷ್ಟು ಬೇಗ ನಮ್ಮನ್ನೆಲ್ಲ ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಅವರ ನಿಧನದಿಂದ ಸಮಾಜಕ್ಕೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ,” ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.
“ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಶಿವಶರಣರು ಕರುಣಿಸಲಿ,” ಎಂದು ಶ್ರೀಗಳು ಪ್ರಾರ್ಥಿಸಿದರು.