ಪಾವಗಡ, ಮೇ 30: ಮಾಜಿ ಸಚಿವ ವೆಂಕಟರಮಣಪ್ಪ ಅವರ ನಿಧನದಿಂದ ಪಾವಗಡ ತಾಲೂಕು ಅನಾಥವಾಗಿದೆ ಎಂದು ಬಿಜೆಪಿ ಮುಖಂಡ ಗೌಡೇಟಿ ಪ್ರಭಾಕರ ಸಂತಾಪ ವ್ಯಕ್ತಪಡಿಸಿದರು.
ಗುರುವಾರ ಪಾವಗಡದ ಗುರುಭವನದಲ್ಲಿ ಶಾಸಕ ಬಿ. ಸುರೇಶ್ ಗೌಡ ಅವರೊಂದಿಗೆ ವೆಂಕಟರಮಣಪ್ಪ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ವೆಂಕಟರಮಣಪ್ಪ ಅವರು ಸಣ್ಣವರಿಂದ ಹಿಡಿದು ಹಿರಿಯರ ತನಕ ಎಲ್ಲರ ಮನಸ್ಸು ಗೆದ್ದ ಅಜಾತಶತ್ರು ನಾಯಕರಾಗಿದ್ದರು ಎಂದು ಹೇಳಿದರು.
ತಾಲೂಕಿನಲ್ಲಿ ನಕ್ಸಲರ ಭೀತಿ ಇದ್ದ ಸಂದರ್ಭದಲ್ಲಿಯೂ ಬಡವರು ಹಾಗೂ ಸಂಕಷ್ಟದಲ್ಲಿದ್ದ ಜನರ ನೆರವಿಗೆ ಧಾವಿಸುತ್ತಿದ್ದ ಅವರು, ಜನಪರ ಕಾಳಜಿಯಿಂದ ಗುರುತಿಸಿಕೊಂಡಿದ್ದರು. ಇಂತಹ ಹಿರಿಯ ನಾಯಕರನ್ನು ಕಳೆದುಕೊಂಡಿರುವುದು ತಾಲೂಕಿನಿಗೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.
ಚುನಾವಣೆ ಮುಗಿದ ನಂತರ ವಿರೋಧಿಗಳನ್ನೂ ಸಹ ಪ್ರೀತಿಯಿಂದ ಕಾಣುತ್ತಿದ್ದ ವೆಂಕಟರಮಣಪ್ಪ ಅವರು, ಜನರ ಕೆಲಸಗಳಿಗೆ ಸದಾ ಸ್ಪಂದಿಸುತ್ತಿದ್ದರು ಎಂದು ಪ್ರಭಾಕರ ಸ್ಮರಿಸಿದರು.
ನಾನು ಒಮ್ಮೆ ಭೇಟಿಯಾದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ತಾವೂ ಭಾಗಿಯಾಗಿದ್ದ ವಿಚಾರವನ್ನು ನೆನಪಿಸಿಕೊಂಡಿದ್ದರು. ಪಾವಗಡದ ಡಿ. ನರಸಿಂಹಯ್ಯ ಹಾಗೂ ನಾಗರಾಜ ನಾಯಕ ಅವರು ಹನುಮಂತನಹಳ್ಳಿಯಲ್ಲಿ ಶಾಖೆ ಆರಂಭಿಸಿದ್ದನ್ನು ಸ್ಮರಿಸಿಕೊಂಡು, ಅವರೊಂದಿಗೆ ಕಬಡ್ಡಿ ಆಡಿದ ದಿನಗಳನ್ನೂ ಹಂಚಿಕೊಂಡಿದ್ದರು ಎಂದು ಹೇಳಿದರು.
ಇದೇ ವೇಳೆ, ನಾನು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಸುತ್ತಿರುವ ಪ್ರವಾಸದ ಕುರಿತು ವಿಚಾರಿಸಿದ್ದ ಅವರು, “ಚಿತ್ರದುರ್ಗ ಜಿಲ್ಲೆಯ ಜನರು ಶ್ರಮಜೀವಿಗಳು. ಬಡವರ ಪರವಾಗಿ ಉತ್ತಮ ಕೆಲಸ ಮಾಡಲು ಅಲ್ಲಿ ಸಾಕಷ್ಟು ಅವಕಾಶಗಳಿವೆ. ಅದನ್ನು ಸದ್ಬಳಕೆ ಮಾಡಿಕೊಂಡು ಜನಸೇವೆಯಲ್ಲಿ ತೊಡಗು” ಎಂದು ಸಲಹೆ ನೀಡಿದ್ದರು ಎಂದು ಗೌಡೇಟಿ ಪ್ರಭಾಕರ ಭಾವುಕರಾಗಿ ನೆನಪಿಸಿಕೊಂಡರು.
About The Author
Discover more from JANADHWANI NEWS
Subscribe to get the latest posts sent to your email.