November 26, 2026
IMG-20261126-WA0168

ಚಳ್ಳಕೆರೆ: ಸಿದ್ದರಾಮಯ್ಯ ನೇತೃತ್ವದ ಆಡಳಿತದಲ್ಲಿ ರೈತರಿಗೆ ಅನ್ಯಾಯವಾಗಿದ್ದು, ಹಿಂದಿನ ಬರಗಾಲದ ಪರಿಹಾರ ವಿತರಣೆಯಲ್ಲಿನ ಲೋಪದೋಷಗಳಿಂದಾಗಿ ಪ್ರಸ್ತುತ ಬೆಳೆ ನಷ್ಟಕ್ಕೆ ಕೇಂದ್ರ ಸರ್ಕಾರದಿಂದ ದೊರೆಯಬೇಕಾದ ಅನುದಾನ ವಿಳಂಬವಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ ಮಾಡಿದರು.

ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ಬಂಜಗೆರೆ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಘದ ನಾಮಫಲಕ ಅನಾವರಣ, ಗಿಡ ನೆಡುವ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ ಹಾಗೂ ಹೊಲ ಉಳಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2023ರ ಬರಗಾಲದ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ₹36 ಸಾವಿರ ಕೋಟಿ ಪರಿಹಾರಕ್ಕಾಗಿ ಬೇಡಿಕೆ ಸಲ್ಲಿಸಿತ್ತು. ಆದರೆ ಕೇಂದ್ರದಿಂದ ಬಿಡುಗಡೆಯಾದ ಅನುದಾನ ಹಾಗೂ ರಾಜ್ಯ ಸರ್ಕಾರ ಸೇರಿಸಿದ ಮೊತ್ತವನ್ನು ರೈತರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಪ್ರಸ್ತುತ ಬರ ಹಾಗೂ ತೀವ್ರ ಬೆಳೆ ನಷ್ಟದ ಹಿನ್ನೆಲೆಯಲ್ಲಿ ₹1.55 ಲಕ್ಷ ಕೋಟಿ ಪರಿಹಾರ ನೀಡುವ ಅಗತ್ಯವಿದೆ. ಪ್ರತಿಯೊಬ್ಬ ರೈತನಿಗೆ ಪ್ರತಿ ಎಕರೆಗೆ ₹25 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದ ಕಾಂಗ್ರೆಸ್ ನಾಯಕರು ಸಂಪಾದಿಸಿರುವ ಹಣವನ್ನು ಜಪಾನ್ ಕಂಪನಿಗಳ ಮೂಲಕ ಬೆಂಗಳೂರಿನಲ್ಲಿ ಸುರಂಗ ಮಾರ್ಗ ಹಾಗೂ ರಸ್ತೆ ನಿರ್ಮಾಣಕ್ಕೆ ಬಳಸುವ ಪ್ರಯತ್ನ ನಡೆಯುತ್ತಿದೆ. ಟೋಲ್ ಸಂಗ್ರಹದ ಮೂಲಕ ಜನರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಹಾಕುವ ಹುನ್ನಾರ ನಡೆದಿದೆ ಎಂದು ಟೀಕಿಸಿದರು. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರಗಳು ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ರೈತ ಹೋರಾಟಗಾರ ಲಕ್ಷ್ಮಣ್ ಹೂಗಾರ್ ಮಾತನಾಡಿ, ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಹೋರಾಟಕ್ಕೆ ಜಯ ದೊರೆತಿದೆ. ಆರಂಭದಲ್ಲಿ ಈ ಯೋಜನೆ ನೀರು ತರುವುದಕ್ಕಿಂತ ಹಣ ಕಬಳಿಸುವ ಯೋಜನೆ ಎಂಬ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಆದರೆ ಯೋಜನೆಗೆ ಹನಿ ನೀರಾವರಿ ವ್ಯವಸ್ಥೆಯನ್ನು ಸೇರಿಸಿ ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದ ರೈತರಿಗೆ ನೀರು ತಲುಪಿಸುವ ಕೆಲಸವಾಗಬೇಕು. ಈ ಹಿಂದೆ ನಿಗದಿಪಡಿಸಿದ್ದ ₹5,300 ಕೋಟಿಯ ಬದಲಿಗೆ ಪ್ರಸ್ತುತ ಬೆಲೆ ಏರಿಕೆಗೆ ಅನುಗುಣವಾಗಿ ₹6,200 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.

ಕತೆಗಾರ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಕೃಷಿಕರ ಬದುಕು ಇಂದು ನಿರಂತರ ಹೋರಾಟದಂತಾಗಿದೆ. ಬರಗಾಲದ ಪರಿಸ್ಥಿತಿಯಲ್ಲಿ ರೈತರಿಗೆ ಅಗತ್ಯ ಸೌಲಭ್ಯಗಳು ದೊರೆಯಬೇಕು. ರೈತ ಸಂಘಟನೆಗಳ ನಿರಂತರ ಹೋರಾಟದ ಮೂಲಕವೇ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಬರಗಾಲದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಸಮರ್ಪಕ ಬೆಳೆ ಪರಿಹಾರ ದೊರೆಯುತ್ತಿಲ್ಲ. ದೇಶಕ್ಕೆ ಆಹಾರ ಒದಗಿಸುವ ರೈತರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕು. ಪ್ರತಿಯೊಂದು ಗ್ರಾಮದಲ್ಲೂ ರೈತ ಸಂಘಟನೆ ಬಲಿಷ್ಠವಾಗಿ ಬೆಳೆಯಬೇಕು. ರೈತ ವಿರೋಧಿ ನೀತಿ ಅನುಸರಿಸುವ ಸರ್ಕಾರಗಳಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಹಸಿರು ಶಾಲಿನ ದುರುಪಯೋಗ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸ್ವಹಿತಾಸಕ್ತಿ ಹಾಗೂ ಪೊಲೀಸ್ ಠಾಣೆಗಳ ಕೆಲಸಗಳಿಗಾಗಿ ಹಸಿರು ಶಾಲನ್ನು ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ನೈಜ ರೈತ ಹೋರಾಟಗಾರರು ಈ ಬಗ್ಗೆ ಜಾಗೃತರಾಗಬೇಕು. ಪಕ್ಷಗಳ ಬಲವರ್ಧನೆಗಾಗಿ ನೌಕರರಿಗೆ ಕೇಳಿದಷ್ಟು ವೇತನ ಮತ್ತು ಭತ್ಯೆ ನೀಡುವ ಸರ್ಕಾರದ ನೀತಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಬರಗಾಲದಲ್ಲಿ ರೈತರು, ಕೂಲಿ ಕಾರ್ಮಿಕರು ಬದುಕು ಸಾಗಿಸುವುದೇ ಕಷ್ಟವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ರಾಜಣ್ಣ, ಬುಡ್ನಹಟ್ಟಿ ತಿಪ್ಪೇಸ್ವಾಮಿ, ಶ್ರೀಕಂಠಮೂರ್ತಿ, ನಿಸರ್ಗ ಗೋವಿಂದರಾಜ್, ಗೌರಿ ಪ್ರಿಂಟರ್ಸ್ ಮಲ್ಲಿಕಾರ್ಜುನ, ಚನ್ನಕೇಶವಮೂರ್ತಿ, ಟಿ. ತಿಪ್ಪೇಸ್ವಾಮಿ, ಜಿ.ಎಚ್. ಹನುಮಂತಪ್ಪ, ಎರ್ರಿಸ್ವಾಮಿ, ನಗರಂಗೆರೆ ಮಹೇಶ್, ಮಾರುತಿ, ಬಂಡೆ ತಿಪ್ಪೇಸ್ವಾಮಿ, ವಿ. ಬೆಟ್ಟಪ್ಪ ಸೇರಿದಂತೆ ರೈತ ಸಂಘದ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading