ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:ತಮ್ಮ ಬದುಕಿನಲ್ಲಿ ಸುಮಾರು ಅರ್ಧಶತಕ ಕಾಲ ತಮ್ಮ ಸುಖ-ದುಃಖಗಳಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ್ದ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಹೃದಯವಿದ್ರಾವಕ ಅಪರೂಪದ ವಿಶೇಷ ಘಟನೆಯೊಂದು ತಾಲೂಕಿನ ಮಾರಗೊಂಡನದಿಬ್ಬ (ಎಂ.ಜಿ. ದಿಬ್ಬ) ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗ್ರಾಮದ ಪುಕ್ಕ ಹನುಮಜ್ಜರ ರಂಗಪ್ಪ (78) ಹಾಗೂ ಅವರ ಪತ್ನಿ ಜಯಮ ್ಮ(68) ಮೃತಪಟ್ಟ ದಂಪತಿ. ಇವರ ಸಾವು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ. ವೃದ್ಧಾಪ್ಯದಲ್ಲೂ ಜೊತೆಯಾಗಿ ಕೊನೆಯುಸಿರೆಳೆದ ಮೃತದಂಪತಿ ನೋಡಲು ಗ್ರಾಮದ ಜನರು ತಂಡೋಪ, ತಂಡವಾಗಿ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು.
ಘಟನೆ ವಿವರ: ಜಯಮ್ಮ ಹಾಗೂ ಅವರ ಪುತ್ರ ಭಾನುವಾರ ಬೆಳಿಗ್ಗೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ರಾಗಿ ಕೊಯ್ಯಲು ಎಂದಿನAತೆ ಹೋಗಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಜಯಮ್ಮ ರಾಗಿ ಕಟಾವು ಮಾಡುತ್ತಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆಗ ಅವರನ್ನು ಪುತ್ರ ಮನೆಗೆ ಕರೆದುಕೊಂಡು ಬಿಟ್ಟಿದ್ದಾರೆ. ಆಗ ಈ ಜಯಮ್ಮ ಬದಲಿಗೆ ರಾಗಿ ಕೊಯ್ಯಲಿಕ್ಕೆ ಗಂಡ ರಂಗಪ್ಪ ಹೋಗಿದ್ದಾರೆ. ಮಗನ ಜೊತೆಗೆ ರಾಗಿ ಕೊಯ್ಯುತ್ತಲೇ ರಂಗಪ್ಪ ಜಮೀನಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಸಂಜೆ ಮನೆ ಬಳಿಗೆ ತಂದಿದ್ದಾರೆ. ರಂಗಪ್ಪ ಮೃತಪಟ್ಟಿರುವ ವಿಷಯ ತಿಳಿದ್ದಂತೆ ಜಯಮ್ಮ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಬಳಿಕ ತಲೆಸುತ್ತು ಹಾಗೂ ವಾಂತಿಯಿAದ ಅಸ್ವಸ್ಥಗೊಂಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪತಿಯ ಅಕಾಲಿಕ ನಿಧನದ ಆಘಾತದಿಂದಲೇ ಜಯಮ್ಮ ಅವರ ಆರೋಗ್ಯ ಹದಗೆಟ್ಟಿರಬಹುದು ಎಂಬ ಶಂಕಿಸಲಾಗಿದೆ. ಸುಮಾರು 50 ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದ ದಂಪತಿ ಕೆಲವೇ ಗಂಟೆಗಳ ಅಂತರದಲ್ಲಿ ಕೊನೆಯ ಉಸಿರಿನಲ್ಲಿಯೂ ಜೊತೆಯಾಗಿ ಇಹಲೋಕ ತೆಜಿಸಿರುವುದರಿಂದ ಗ್ರಾಮದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ. ಒಬ್ಬರನ್ನೊಬ್ಬರು ಅಗಲದಂತೆ ಬದುಕಿದ್ದ ದಂಪತಿ ಸಾವಿನಲ್ಲೂ ಒಂದಾಗಿರುವ ಘಟನೆ ಕಂಡು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ದಂಪತಿಗಳ ನಿಧನದಿಂದ ಕುಟುಂಬದ ಸದಸ್ಯರು, ಬಂಧುಗಳು ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಮೃತ ದಂಪತಿಗೆ ಇಬ್ಬರು ಪುತ್ರರು, ಒಬ್ಬಳು ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಎಂ.ಜಿ.ದಿಬ್ಬದ ರುದ್ರಭೂಮಿಯಲ್ಲಿ ಸೋಮವಾರ ನಡೆಯಿತು.
ಪುಕ್ಕ ಹನುಮಜ್ಜರ ರಂಗಪ್ಪ ಹಾಗೂ ಅವರ ಪತ್ನಿ ಜಯಮ್ಮ ಅವರ ಅಕಾಲಿಕ ಮರಣಕ್ಕೆ ಕುರುಬ ಸಮಾಜದ ಮುಖಂಡ ಡಾ: ಎಂ.ಹೆಚ್.ಕೃಷ್ಣಮೂರ್ತಿ ತೀರ್ವ ಸಂತಾಪ ವ್ಯಕ್ತಪಡಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.
