ಹಿರಿಯೂರು :
ಜನರ ಸಂಕಟವನ್ನು ಅರಿತು ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಜನನಾಯಕನಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಜನರ ಸಂಕಷ್ಟಕ್ಕೆ ಕೂಡಲೇ ಸ್ಪಂದನೆ ನೀಡಬೇಕೆಂಬ ಉದ್ದೇಶದಿಂದ ಈ “ಪ್ರಜಾಸೇವಾ” ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಮೂಲಕ ಜನರು ಪರಿಹಾರ ಪಡೆಯಬಹುದಾಗಿದೆ ಎಂಬುದಾಗಿ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ನೆಹರು ಮೈದಾನದಲ್ಲಿ “ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ್ದ “ಪ್ರಜಾಸೇವಾ” ಅಭಿಯಾನವನ್ನು ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಕನಕಪುರ ಕ್ಷೇತ್ರದಷ್ಟೇ ಹಿರಿಯೂರು ಕ್ಷೇತ್ರವೂ ನನಗೆ ಪ್ರಮುಖವಾದ ಕ್ಷೇತ್ರವಾಗಿದೆ, ಏಕೆಂದರೆ ಹಿರಿಯೂರಿನ ಶಾಸಕ ದಿವಂಗತ ಡಿ.ಸುಧಾಕರ್ ರವರು ನನ್ನ ಆತ್ಮೀಯ ಗೆಳೆಯನಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಈ ತಾಲ್ಲೂಕಿನ ಅಭಿವೃದ್ಧಿಯ ಬಗ್ಗೆ ಸುಧಾಕರ್ ರವರು ಕಂಡ ಎಲ್ಲಾ ಕನಸುಗಳನ್ನು ನನಸು ಮಾಡಲು ಹಿರಿಯೂರಿಗೆ ಅಭಿವೃದ್ಧಿಯ ಲಕ್ಷ್ಮಿಯನ್ನು ತಂದಿದ್ದೇನೆ ಎಂಬುದಾಗಿ ಅವರು ಹೇಳಿದರು.
ತಾಲ್ಲೂಕಿನ ಅಭಿವೃದ್ಧಿಗಾಗಿ ಈಗಾಗಲೇ ಹಲವಾರು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದು, ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರುಹರಿಸುವ ಮೂಲಕ ಇಲ್ಲಿನ ರೈತರ 70 ವರ್ಷಗಳ ಕನಸು ನನಸು ಮಾಡಿದ್ದೇನೆ, ತಾಲ್ಲೂಕಿನ ಕೆರೆಗಳಿಗೆ ನೀರು, 3ಸಾವಿರ ಮನೆಗಳು, ದೇವಸ್ಥಾನಗಳಿಗೆ 20ಕೋಟಿ, ಗ್ರಾಮೀಣ ರಸ್ತೆಗಳಿಗೆ 50 ಕೋಟಿ, ಕೆ.ಎಸ್.ಆರ್.ಟಿ.ಸಿ ಗೆ 5ಕೋಟಿ, ಒಳಚರಂಡಿಗೆ 100 ಕೋಟಿ ಸೇರಿದಂತೆ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ ಎಂದರಲ್ಲದೆ,
ಹೆಣ್ಣು ಕುಟುಂಬದ ಕಣ್ಣು, ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಮಹಿಳೆಯರು ಪ್ರಮುಖ ಪಾತ್ರ ವಹಿಸಲಿದ್ದಾರೆ, ಅಂತಹ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ನಮ್ಮ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದ್ದು, ಇದೀಗ 6ನೇ ಗ್ಯಾರೆಂಟಿ ಯೋಜನೆಯಾದ 30*40 ಸೈಟ್ ಗಳ ವಸತಿ ಸೌಲಭ್ಯವನ್ನು ಸಹ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿದ್ದು, ಮಹಿಳೆಯರ ಸಬಲೀಕರಣ ಹಾಗೂ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.
ವೇದಿಕೆಯಲ್ಲಿರುವ ಕುಳಿತಿರುವ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಈಗಾಗಲೇ ಜೆಡಿಎಸ್ ಪಕ್ಷ ಹಾಗೂ ಬಿಜೆಪಿ ಪಕ್ಷಗಳಲ್ಲಿ ಕಾರ್ಯ ನಿರ್ವಹಿಸಿ, ಆ ಪಕ್ಷಗಳಲ್ಲಿ ಜನಸೇವೆ ಮಾಡಲು ಸಾಧ್ಯವಿಲ್ಲವೆಂದು ಮನಗಂಡು, ಕಾಂಗ್ರೆಸ್ ಪಕ್ಷದಿಂದ ಮಾತ್ರ ರಾಜ್ಯದಲ್ಲಿ ಜನಪರ ಅಭಿವೃದ್ಧಿ ಕಾರ್ಯಗಳು ಸಾಧ್ಯವೆಂದು ತಿಳಿದು, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ ಎಂಬುದಾಗಿ ಹೇಳಿದರು.
ತಾಲ್ಲೂಕಿನ ಜನರ ಬದುಕಿನಲ್ಲಿ ಹೊಸ ಬದಲಾವಣೆಯ ಬೆಳಕು ಕೊಡಲು ನಾನು ಬಂದಿದ್ದೇನೆ, ವಾಣಿವಿಲಾಸ ಸಾಗರಕ್ಕೆ ಭದ್ರಾ ನೀರು ಹರಿಸಿಯಾಗಿದೆ, ಹಿರಿಯೂರಿನ ಸಮಗ್ರ ಅಭಿವೃದ್ಧಿಗೆ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರೂ ನಾನೇ ಸ್ಪರ್ಧಿಸಿದ್ದೇನೆಂದು ಭಾವಿಸಿ, ನಿಮ್ಮ ಅಮೂಲ್ಯವಾದ ಮತವನ್ನು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ನೀಡುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂಬುದಾಗಿ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ ಮಾತನಾಡಿ, ರಾಜ್ಯದ ಜನತೆ ಸಾರ್ವಜನಿಕ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಸಪ್ಟೆಂಬರ್ 5ರಂದು ಪ್ರಜಾ ಸೇವಾ ಅಭಿಯಾನವನ್ನು ಜಾರಿಗೆ ತಂದಿದ್ದು, ಅಂದಿನಿಂದ ಇಲ್ಲಿಯವರೆಗೂ ಹಲವಾರು ತಾಲ್ಲೂಕುಗಳಲ್ಲಿ ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದರಲ್ಲದೆ,
ಈಗಾಗಲೇ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಬರದ ನಾಡಿಗೆ ಭದ್ರಾ ನೀರನ್ನು ಹರಿಸಿದ ಕೀರ್ತಿ ನಮ್ಮ ಕಾಂಗ್ರೆಸ್ ಸರ್ಕಾರದ್ದಾಗಿದ್ದು, ಈಗಾಗಲೇ 4ಟಿಎಂಸಿ ನೀರನ್ನು ವಾಣಿವಿಲಾಸ ಸಾಗರಕ್ಕೆ ಹರಿಸಲಾಗಿದೆ, ಆದರೆ ಬರಗಾಲದಿಂದ ಕುಡಿಯುವ ನೀರಿಗೂ ಸಂಕಷ್ಟ ಇರುವ ಚಿತ್ರದುರ್ಗ ಜಿಲ್ಲೆಗೆ ಹೆಚ್ಚುವರಿಯಾಗಿ 2 ಟಿಎಂಸಿ ನೀರನ್ನು ಹರಿಸಬೇಕು ಎಂಬುದಾಗಿ ಮುಖ್ಯಮಂತ್ರಿಗಳಿಗೆ ಅವರು ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಚೆಲುವ ನಾರಾಯಣಸ್ವಾಮಿ, ವಸತಿ ಇಲಾಖೆ ಸಚಿವರಾದ ಜಮೀರ್ ಅಹಮದ್ ಖಾನ್, ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಹಕ್ಕುಪತ್ರಗಳನ್ನು ಪೌತಿಖಾತೆಯಡಿ ಫಲಾನುಭವಿಗಳಿಗೆ ವಿತರಿಸಲಾಯಿತು.ಪೌರಕಾರ್ಮಿಕರಿಗೆ ಬಟ್ಟೆ, ವಿದ್ಯಾರ್ಥಿಗಳಿಗೆ ಲ್ಯಾಬ್ ಟಾಪ್, ವಿಕಲಚೇತರಿಗೆ ವಾಹನ ವಿತರಣೆ ಮಾಡಲಾಯಿತು.
ಆರಂಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಎಸ್.ರಮ್ಯಾರವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ರಘುಮೂರ್ತಿ, ಜಲ ಸಂಪನ್ಮೂಲ ಸಚಿವರಾದ ಚೆಲುವರಾಯಸ್ವಾಮಿ, ವಸತಿ ಇಲಾಖೆ ಸಚಿವರಾದ ಜಮೀರ್ ಅಹಮದ್ ಖಾನ್, ಪೌರಾಡಳಿತ ಸಚಿವರಾದ ಹೆಚ್.ಸಿ.ಬಾಲಕೃಷ್ಣ, ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್, ರಾಜ್ಯ ಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಹೊಸದುರ್ಗ ಶಾಸಕರಾದ ಬಿ.ಜೆ.ಗೋವಿಂದಪ್ಪ, ಮೊಳಕಾಲ್ಮೂರು ಶಾಸಕರಾದ ಎನ್.ಎಂ.ಗೋಪಾಲಕೃಷ್ಣ, ಚಿತ್ರದುರ್ಗ ಶಾಸಕರಾದ ಕೆ.ಸಿ.ವೀರೇಂದ್ರಪಪ್ಪಿ, ಮಾಜಿ ಸಚಿವ ಹೆಚ್.ಆಂಜನೇಯ, ವಿಧಾನಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಎಂ.ಕೆ.ತಾಜ್ ಪೀರ್, ಟಿ.ರಘು, ಕುಣಿಗಾಲ್ ಶಾಸಕರಾದ ಹೆಚ್.ಡಿ.ರಂಗನಾಥ್, ಮಾಜಿ ಶಾಸಕ ಸೋಮಣ್ಣ, ಎಂ.ಮಹೇಶ್, ಮೊಹಮದ್ ಪಾಷಾ, ಶಿವಣ್ಣ, ಬಿ.ಎನ್.ಚಂದ್ರಪ್ಪ, ಐಜಿಪಿ ಸತೀಶ್ ಕುಮಾರ್, ಕಾಂಗ್ರೆಸ್ ಮುಖಂಡ ಸುಹಾಸ್ ಸುಧಾಕರ್, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸೂರಗೊಂಡನಹಳ್ಳಿ, ಕೃಷ್ಣ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜಿ.ಪಂ.ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.










About The Author
Discover more from JANADHWANI NEWS
Subscribe to get the latest posts sent to your email.
