ಬೆಂಗಳೂರು: ಶ್ರೀ ರಾಮಕೃಷ್ಣ ಮಠ, ಬೆಂಗಳೂರಿಗೆ ಎಂದಿನಂತೆ ವಾರದ ಭೇಟಿಗಾಗಿ ಆಗಮಿಸಿದ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ಸನ್ಯಾಸಿಗಳ ದರ್ಶನ ಪಡೆದು, ಆಧ್ಯಾತ್ಮಿಕ ಒಡನಾಟದ ಸಂತಸವನ್ನು ಹಂಚಿಕೊಳ್ಳುವ ಅಪೂರ್ವ ಅವಕಾಶ ದೊರೆಯಿತು.
ಈ ಸಂದರ್ಭದಲ್ಲಿ ಋಷಿಕೇಶದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಉಮೇಶ್ವರಾನಂದಜೀ ಅವರ ದರ್ಶನ ಪಡೆದು, ಅವರೊಂದಿಗೆ ಹಲವು ಗಂಟೆಗಳ ಕಾಲ ಆತ್ಮೀಯವಾಗಿ ಸಂಭಾಷಣೆ ನಡೆಸಲಾಯಿತು.
ಪೂಜ್ಯ ಸ್ವಾಮಿ ಉಮೇಶ್ವರಾನಂದಜೀ ಅವರು 1976ರಿಂದಲೂ ನನ್ನನ್ನು ಪರಿಚಯಿಸಿಕೊಂಡಿದ್ದು, ಸುದೀರ್ಘ ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದಾರೆ. ನಾನು ಸನ್ಯಾಸ ಸ್ವೀಕರಿಸಿದ ನಂತರ ಕೆಲಕಾಲ ಋಷಿಕೇಶದ ರಾಮಕೃಷ್ಣ ಮಠದಲ್ಲಿ ಪವಿತ್ರ ಗಂಗಾ ನದಿಯ ತಟದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡುವ ಸುವರ್ಣಾವಕಾಶ ದೊರೆತಿತ್ತು. ಆ ಸಂದರ್ಭದಲ್ಲಿ ಸ್ವಾಮೀಜಿಯವರು ಅತ್ಯಂತ ಪ್ರೀತಿ, ಆದರ ಹಾಗೂ ಆತ್ಮೀಯತೆಯಿಂದ ನನ್ನನ್ನು ಸಲುಹಿದ ಸವಿನೆನಪುಗಳು ಇಂದಿಗೂ ಮನದಲ್ಲಿ ಹಸಿರಾಗಿವೆ.
ಆ ದಿನಗಳಿಂದಲೂ ಆಗಾಗ್ಗೆ ಪೂಜ್ಯರ ದರ್ಶನ ಹಾಗೂ ಸತ್ಸಂಗದ ಅವಕಾಶ ದೊರೆಯುತ್ತಿರುವುದು ನನ್ನ ಪಾಲಿನ ಭಾಗ್ಯವೇ ಸರಿ. ಇಂದೂ ಬೆಂಗಳೂರಿನ ರಾಮಕೃಷ್ಣ ಮಠದಲ್ಲಿ ಅನೇಕ ಸಾಧುಗಳ ಸಮಾಗಮವಾಗಿದ್ದು, ಹಿರಿಯ ಸಾಧುಗಳ ಸಾನ್ನಿಧ್ಯ ಮತ್ತು ಕಿರಿಯ ಸನ್ಯಾಸಿಗಳ ಒಡನಾಟ ಮನಸ್ಸಿಗೆ ವಿಶೇಷ ಆನಂದ ಹಾಗೂ ನೆಮ್ಮದಿಯನ್ನು ನೀಡಿತು.
ಈ ಭಯಾನಕ ಜಗತ್ತಿನ ಜನಜಂಜಾಟದ ನಡುವೆ, ಸೇವಾಯಜ್ಞದ ಮೂಲಕ ಭಗವಂತನ ಸೇವೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಇಂತಹ ಸಾಧುಪುರುಷರ ಸಂಪರ್ಕ, ಸತ್ಸಂಗ ಹಾಗೂ ಆಶೀರ್ವಾದ ದೊರೆಯುವುದು ನಿಜಕ್ಕೂ ಅಪಾರ ಸಂತೋಷದ ಸಂಗತಿ. ಇಂತಹ ಆಧ್ಯಾತ್ಮಿಕ ಅನುಭವಗಳ ಆನಂದವನ್ನು ಅನುಭವಿಸಿದವರೇ ಅರಿಯಬಲ್ಲರು.
ಜೈ ಶ್ರೀ ರಾಮಕೃಷ್ಣ! ಜೈ ಮಾ ಶಾರದಾ! ಜೈ ಸ್ವಾಮಿ ವಿವೇಕಾನಂದಜೀ!

About The Author
Discover more from JANADHWANI NEWS
Subscribe to get the latest posts sent to your email.
