November 24, 2026
IMG-20261124-WA0261


ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಒಂದೇ ನೀರಿನ ಮೂಲವನ್ನು ಅವಲಂಬಿಸದೆ ಪರ್ಯಾಯ ನೀರಿನ ಮೂಲಗಳನ್ನು ಗುರುತಿಸಿ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಟಾಸ್ಕ್ಫೋರ್ಸ್ ಹಾಗೂ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲೂಕಿನ ಅನೇಕ ಗ್ರಾಮಗಳಲ್ಲಿ ನಿವೇಶನಗಳ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯಿಂದ ಜಮೀನು ಒದಗಿಸಲಾಗಿದೆ. ಈಗಾಗಲೇ ಅಭಿವೃದ್ಧಿಪಡಿಸಿರುವ ನಿವೇಶನಗಳಿಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ, ನಿವೇಶನ ರಹಿತರಿಗೆ ಆದಷ್ಟು ಬೇಗ ಹಕ್ಕುಪತ್ರ ವಿತರಿಸಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಬೋರ್‌ವೆಲ್ ವಾಹನ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬರುತ್ತಿಲ್ಲ ಎಂಬ ವಿಷಯ ಗಮನಕ್ಕೆ ಬಂದಾಗ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬೇರೆ ಏಜೆನ್ಸಿಯನ್ನು ಸಂಪರ್ಕಿಸಿ ಬುಧವಾರದಿಂದಲೇ ಕೊಳವೆಬಾವಿ ಕೊರೆಯುವ ಕಾರ್ಯ ಆರಂಭಿಸಬೇಕು. ಕೆಲಸದ ಬಗ್ಗೆ ಕೇಳಿದಾಗ ಕಳುಹಿಸಿದ್ದೇನೆ ಎಂದು ತಪ್ಪು ಮಾಹಿತಿ ನೀಡಬೇಡಿ. ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಜಿಎನ್ ಕೆರೆ ಸರ್ವೆ ನಂಬರ್ 100ರಲ್ಲಿನ ಜಮೀನಿಗೆ ಸಂಬAಧಿಸಿದAತೆ ನಮೂನೆ 1 ರಿಂದ 5ಕ್ಕೆ ಬದಲಾವಣೆ ಮಾಡಬೇಕಿದ್ದು, ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಮತ್ತೋಡು ಹೋಬಳಿ ಕಂದಾಯ ಅಧಿಕಾರಿಗಳಿಗೆ ಈ ಕೆಲಸದ ಬಗ್ಗೆ ಎಷ್ಟು ದಿನ ಹೇಳಬೇಕು? ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೇ? ಜನರಿಗೆ ನಾನೇನು ಉತ್ತರ ನೀಡಬೇಕು ಎಂದು ಪ್ರಶ್ನಿಸಿ, ಅಧಿಕಾರಿಗಳು ವಿಳಂಬ ಮಾಡದೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ದೇವಪುರ ಗ್ರಾಮ ಪಂಚಾಯಿತಿ ಹಾಗೂ ಸಣ್ಣಕಿಟ್ಟದಹಳ್ಳಿ ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿ ಹಾಗೂ ನಾಕಿಕೆರೆ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದಾಗಿ ಪಿಡಿಒಗಳು ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸೂಕ್ತ ಸ್ಥಳ ಗುರುತಿಸಿ ಕೊಳವೆಬಾವಿ ಕೊರೆಸಬೇಕು. ವೈಜ್ಞಾನಿಕವಾಗಿ ನೀರಿನ ಪಾಯಿಂಟ್ ಗುರುತಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇಗೆ ಸೂಚಿಸಿದರು.
ದುಗ್ಗವಾರ ಗ್ರಾಮದ ತಿಮ್ಮಕ್ಕ ಎನ್ನುವರಿಗೆ 25 ವರ್ಷಗಳ ಹಿಂದೆಯೇ ಜಮೀನು ಸಾಗುವಳಿ ಚೀಟಿ ಕೊಡಬೇಕಿತ್ತು. ಈಗಿನ ಅಧಿಕಾರಿಗಳು ಸಹ ಹೆಣ್ಣು ಮಗಳು ಎಂಬ ಕಾಳಜಿ ವಹಿಸದೆ ಕಚೇರಿಗೆ ಅಲೆದಾಡಿಸುತ್ತಿದ್ದೀರ. ನಿಮಗೆ ಮನಸಾಕ್ಷಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ತಹಸೀಲ್ದಾರ್ ಗಮನ ಹರಿಸಿ ಅದಷ್ಟು ಬೇಗ ನೊಂದ ಮಹಿಳೆಗೆ ಸಾಗುವಳಿ ಚೀಟಿ ನೀಡುವೆ ಎಂದರು ಈ ವೇಳೆ ತಾಪಂ ಇಓ ಸುನಿಲ್ ಕುಮಾರ್ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading