ಚಿತ್ರದುರ್ಗ ಸೆ.24:
ಆಯುರ್ವೇದ ಔಷಧಿಗಳು ಪರಿಣಾಮಕಾರಿಯಾಗಿದ್ದು, ದೀರ್ಘಕಾಲೀನ ರೋಗಗಳನ್ನು ಗುಣಪಡಿಸುವಲ್ಲಿ ಅತ್ಯಂತ ಯಶಸ್ವಿಯಾಗಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ ತಿಳಿಸಿದರು.
ಇಲ್ಲಿನ ಎಸ್.ಜೆ.ಎಂ. ಕಾಲೇಜ್ ಆಫ್ ಫಾರ್ಮಸಿಯಲ್ಲಿ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಎಸ್.ಜೆ.ಎಂ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘11ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
ಈ ಬಾರಿಯ ಘೋಷವಾಕ್ಯ ‘ಆರೋಗ್ಯಕ್ಕಾಗಿ, ನಾಳೆಗಾಗಿ ಆಯುರ್ವೇದ’ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಸ್‍ಜೆಎಂ ಕಾಲೇಜ್ ಆಫ್ ಫಾರ್ಮಸಿ ಪ್ರಾಂಶುಪಾಲ ಡಾ. ಮಾರುತಿ ಎಸ್. ಎಕ್‍ಬೋಟೆ, ಆಯುರ್ವೇದವು ಅನಾದಿಕಾಲದಿಂದಲೂ ಪ್ರಚಲಿತದಲ್ಲಿದ್ದು, ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಪ್ರಪಂಚದಲ್ಲೇ ತನ್ನದೇ ಆದ ಸ್ವಂತ ಹಾಗೂ ಪ್ರಾಚೀನ ಚಿಕಿತ್ಸಾ ಪದ್ಧತಿಯನ್ನು ಹೊಂದಿರುವ ಏಕೈಕ ದೇಶ ಭಾರತ. ಪ್ರಸ್ತುತ ಸಾರ್ವಜನಿಕರು ಇದರ ಸೌಲಭ್ಯ ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿದ್ದಾರೆ ಎಂದರು.
ರಕ್ತದಾನ ಶಿಬಿರಕ್ಕೆ ಚಾಲನೆ: ಆಯುರ್ವೇದ ದಿನಾಚರಣೆಯ ಅಂಗವಾಗಿ ಉಪನ್ಯಾಸ ಮಾಲಿಕೆ, ವಸ್ತುಪ್ರದರ್ಶನ, ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಒಟ್ಟು 15 ಯೂನಿಟ್‍ಗಳಷ್ಟು ರಕ್ತ ಸಂಗ್ರಹವಾಯಿತು.
ಡಾ. ಮಂಜುಳಾ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಜಿ.ಬಿ.ನಾರದಮುನಿ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್‍ಆರ್.ಕುಮಾರಸ್ವಾಮಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಹಾಗೂ 155ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.