April 24, 2026
FB_IMG_1777032576756.jpg

ಚಿತ್ರದುರ್ಗಏ.24:
ನಟಸಾರ್ವಭೌಮ ಡಾ. ರಾಜ್‍ಕುಮಾರ್ ಅವರು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದ ಮಾನವೀಯ ಗುಣಗಳು ಮತ್ತು ಮೌಲ್ಯಗಳು ಇಂದಿನ ತಲೆಮಾರಿಗೆ ದಾರಿದೀಪವಾಗಿವೆ ಎಂದು ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ರಘುಮೂರ್ತಿ ಹೇಳಿದರು.

ನಗರದ ಪತ್ರಿಕಾಭವನದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಟಸಾರ್ವಭೌಮ ಡಾ.ರಾಜ್‍ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ.ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ರಾಜ್‍ಕುಮಾರ್ ಅವರು ರಾಮಾಯಣ, ಮಹಾಭಾರತದ ಪಾತ್ರಗಳಿರಲಿ, ಕಾದಂಬರಿ ಆಧಾರಿತ ಸಿನಿಮಾಗಳಿರಲಿ ಅವರು ಮಾಡದ ಪಾತ್ರಗಳೇ ಇಲ್ಲ. ಅಂದಿನ ಕಾಲದಲ್ಲಿ ಚಲನಚಿತ್ರ ಮತ್ತು ನಾಟಕಗಳ ಮೂಲಕವೇ ಜನರು ಜೀವನದ ಗುರಿಯನ್ನು ಕಂಡುಕೊಳ್ಳುತ್ತಿದ್ದರು ಮತ್ತು ಅದರಲ್ಲಿ ಡಾ. ರಾಜ್‍ಕುಮಾರ್ ಅವರ ಪಾತ್ರ ಬಹಳ ದೊಡ್ಡದಾಗಿತ್ತು ಎಂದು ತಿಳಿಸಿದರು.
ಪುನೀತ್ ರಾಜ್‍ಕುಮಾರ್ ಅವರ ಬಗ್ಗೆಯೂ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ತಂದೆಯಿಂದ ಬಂದ ಸಂಸ್ಕಾರವನ್ನು ಪುನೀತ್ ಅವರು ಅಕ್ಷರಶಃ ಪಾಲಿಸಿದರು. ಪುನೀತ್ ಅವರು ಬದುಕಿದ್ದಾಗ ಮಾಡಿದ್ದಕ್ಕಿಂತ ಹೆಚ್ಚಿನ ಸಾಮಾಜಿಕ ಕಾರ್ಯಗಳು ಅವರು ಮರಣ ಹೊಂದಿದ ನಂತರ ಜಗತ್ತಿಗೆ ತಿಳಿಯಿತು. ಡಾ. ರಾಜ್‍ಕುಮಾರ್ ಅವರ ನಡೆ-ನುಡಿ ಅವರ ಮಕ್ಕಳಲ್ಲೂ ಪ್ರತಿಫಲಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಡಾ. ರಾಜ್‍ಕುಮಾರ್ ಅವರು ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಸಿನಿಮಾಗಳನ್ನು ನೋಡಿದಾಗ ನಾವೆಲ್ಲರೂ ಅಂತಹ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಮನೋಭಾವ ಮೂಡುತ್ತದೆ ಎಂದು ಹೇಳಿದರು.
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ವರನಟ ಡಾ. ರಾಜ್‍ಕುಮಾರ್ ಅವರು ತಮ್ಮ ಸಿನಿಮಾಗಳ ಮೂಲಕ ಸಮಾಜಕ್ಕೆ ನೀಡಿದ ಸಂದೇಶಗಳು ಮತ್ತು ಅವರ ಸರಳ ವ್ಯಕ್ತಿತ್ವ ಇಂದಿಗೂ ನಮಗೆಲ್ಲರಿಗೂ ಆದರ್ಶಪ್ರಾಯ ಎಂದು ತಿಳಿಸಿದರು.
ನಮ್ಮ ಮಕ್ಕಳು ಇಂದು ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಓದುತ್ತಿದ್ದಾರೆ ಎಂದರೆ ಅದಕ್ಕೆ ಡಾ. ರಾಜ್‍ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿ ಕಾರಣ. ಅಂದಿನ ಸರ್ಕಾರಗಳ ಮೇಲೆ ಒತ್ತಡ ಹೇರಿ ಕನ್ನಡಕ್ಕೆ ಮೊದಲ ಸ್ಥಾನ ಸಿಗುವಂತೆ ಮಾಡಿದ ಅವರ ಹೋರಾಟ ಅವಿಸ್ಮರಣೀಯ ಎಂದು ನೆನಪಿಸಿಕೊಂಡರು. ಎಂಭತ್ತರ ದಶಕದಲ್ಲಿ ರಾಜಣ್ಣ ಚಳ್ಳಕೆರೆ ಪ್ರೌಢಶಾಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನೆರೆದಿದ್ದ ಜನಸಾಗರವನ್ನು ಈ ವೇಳೆ ಶಾಸಕರು ಸ್ಮರಿಸಿದರು.
ಡಾ. ರಾಜ್ ಅವರಿಗೆ ಹಣದ ವ್ಯಾಮೋಹ ಇರಲಿಲ್ಲ. ಅವರ ಈ ಯಶಸ್ಸಿನ ಹಿಂದೆ ಪತ್ನಿ ಪಾರ್ವತಮ್ಮ ಅವರ ಶ್ರಮ ದೊಡ್ಡದಿದೆ. ಅವರಿಬ್ಬರೂ ಆದರ್ಶ ದಂಪತಿಗಳಾಗಿ ಬದುಕಿದವರು. ರಾಜಣ್ಣ ಅವರ ಸಿನಿಮಾಗಳನ್ನು ನೋಡಿ ಎಷ್ಟೋ ಜನರು ಕೃಷಿಕರಾದರು, ಯೋಗಾಭ್ಯಾಸ ಕಲಿತರು. ಅವರ ಹಾಡುಗಳು ಇಂದಿಗೂ ಜನರ ಮನದಲ್ಲಿ ಹಸಿರಾಗಿವೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಕನ್ನಡದ ಕಂದ, ವರನಟ ಡಾ. ರಾಜ್‍ಕುಮಾರ್ ಅವರಿಗೂ ಚಿತ್ರದುರ್ಗಕ್ಕೂ ಅತ್ಯಂತ ಹಳೆಯ ಮತ್ತು ಗಾಢವಾದ ಸಂಬಂಧವಿದೆ. ರಾಜ್‍ಕುಮಾರ್ ಅವರು ಚಿತ್ರರಂಗಕ್ಕೆ ಬರುವ ಮುನ್ನ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಚಿತ್ರದುರ್ಗದ ಎಸ್‍ಎಲ್‍ಎನ್ ಥಿಯೇಟರ್ ಬಳಿ ಅನೇಕ ವರ್ಷಗಳ ಕಾಲ ನೆಲೆಸಿದ್ದರು. ಇಂದಿನ ಒನಕೆ ಓಬವ್ವ ಕ್ರೀಡಾಂಗಣ ನಿರ್ಮಾಣಕ್ಕೆ ಹಣದ ಅವಶ್ಯಕತೆಯಿದ್ದಾಗ, ಡಾ. ರಾಜ್‍ಕುಮಾರ್ ಅವರು ಚಿತ್ರದುರ್ಗದಲ್ಲಿ ‘ರಾಜ್‍ಕುಮಾರ್ ನೈಟ್’ ನಡೆಸಿಕೊಟ್ಟು, ಯಾವುದೇ ಸಂಭಾವನೆ ಪಡೆಯದೆ ಕ್ರೀಡಾಂಗಣಕ್ಕೆ ಆರ್ಥಿಕ ಸಹಕಾರ ನೀಡಿದ್ದರು ಎಂದು ಹೇಳದರು.
ಡಾ.ರಾಜ್‍ಕುಮಾರ್ ಅವರ ಕುರಿತು ಉಪನ್ಯಾಸ ನೀಡಿದ ಚಿತ್ರದುರ್ಗ ಆಕಾಶವಾಣಿಯ ಡಾ.ನವೀನ್ ಮಸ್ಕಲ್, ಡಾ.ರಾಜ್‍ಕುಮಾರ್ ಅವರ ಬಗ್ಗೆ ಮಾತನಾಡುವುದು, ಬರೆಯುವುದು ಅಂದರೆ ಅದು ಕರಿಯನ್ನು ಕನ್ನಡಿಯಲ್ಲಿ ಸೆರೆಹಿಡಿದಂತೆ. ಅವರ ಬಗ್ಗೆ ಮಾತನಾಡುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಗಳಲ್ಲಿ ಒಂದು. ಡಾ.ರಾಜ್‍ಕುಮಾರ್ ಸಿನಿಮಾ ಕಲಾವಿದರು ಮಾತ್ರವಲ್ಲ. ಅವರು ಸಿನಿಮಾದೊಳಗಿದ್ದು, ಸಿನಿಮಾವನ್ನು ಮೀರಿದ ಸಾಂಸ್ಕøತಿಕ ವ್ಯಕ್ತಿತ್ವದವರಾಗಿ ಬದುಕಿದವರು. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಪ್ರಬಲವಲ್ಲದ ವಲಯದಿಂದ ಬಂದು ಸ್ವ ಸಾಮಥ್ರ್ಯದಿಂದಲೇ ಎತ್ತರಕ್ಕೇರಿದ ಅವರು ಸಾಮಾಜಿಕವಾಗಿಯು ಮುಖ್ಯ ಸಾಧಕರು ಎಂದು ಹೇಳಿದರು.
ಕೇವಲ ನಾಲ್ಕನೇ ತರಗತಿಯವರೆಗೆ ಓದಿದ್ದರೂ ಡಾ.ರಾಜ್‍ಕುಮಾರ್ ಅವರ ಬದುಕು ಮತ್ತು ಸಾಧನೆಯ ಕುರಿತು ಇಂದು ದೊಡ್ಡ ವಿಶ್ವವಿದ್ಯಾಲಯಗಳೇ ಸಂಶೋಧನೆ ನಡೆಸುತ್ತಿವೆ. ಅವರ ವಿನಯಶೀಲತೆಯೇ ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿತ್ತು. ಬಂಗಾರದ ಮನುಷ್ಯ ಚಿತ್ರದ ಮೂಲಕ ಅದೆಷ್ಟೋ ವಿದ್ಯಾವಂತ ಯುವಕರು ಕೃಷಿಯತ್ತ ಮುಖ ಮಾಡುವಂತೆ ಪ್ರೇರೇಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಬಣ್ಣದ ಲೋಕದ ಆಚೆಗೂ ಒಬ್ಬ ಬೆವರಿನ ಮನುಷ್ಯನಾಗಿ ಗುರಿತಿಸಿಕೊಂಡಿದ್ದರು ಎಂದರು .
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್.ವಿನಾಯಕ ತೊಡರನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಂಜಿನಪ್ಪ ಸೇರಿದಂತೆ ಮತ್ತಿತರರು ಇದ್ದರು. ಕೆ.ಗಂಗಾಧರ್ ಮತ್ತು ಸಂಗಡಿಗರು ಡಾ.ರಾಜ್‍ಕುಮಾರ್ ಚಲನಚಿತ್ರ ಗೀತೆಗಳ ಗಾಯನ ನಡೆಸಿಕೊಟ್ಟರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading