September 23, 2026
IMG-20260922-WA0272



ಪಾವಗಡ ತಾಲ್ಲೂಕಿನ ದವಡಬೆಟ್ಟ ಎಂಬ ಕುಗ್ರಾಮದಲ್ಲಿ 75 ವರ್ಷದ ವಯೋವೃದ್ಧ ಶ್ರೀ ಚಿಕ್ಕಣ್ಣ ಅವರ ಏಕೈಕ ಪುಟ್ಟ ಮನೆ ಬೆಂಕಿಗೆ ಆಹುತಿಯಾಗಿದ್ದು, ಮನೆಯಲ್ಲಿದ್ದ ಅಷ್ಟಿಷ್ಟು ಕೂಡಿಟ್ಟ ಹಣ, ಪಾತ್ರೆ, ಬಟ್ಟೆ ಹಾಗೂ ಮನೆ ಬಳಕೆಯ ಸಂಪೂರ್ಣ ಸಾಮಾನುಗಳು ಸುಟ್ಟು ಭಸ್ಮವಾಗಿವೆ.
ಒಂದೇ ಕಣ್ಣನ್ನು ಹೊಂದಿರುವ ವಯೋವೃದ್ಧ ಚಿಕ್ಕಣ್ಣ ಅವರ ದುಸ್ಥಿತಿಯ ವಿಚಾರ ತಿಳಿದ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಕೇವಲ 24 ಗಂಟೆಯೊಳಗೆ ದವಡಬೆಟ್ಟ ಗ್ರಾಮಕ್ಕೆ ತೆರಳಿ, ಘಟನಾ ಸ್ಥಳವನ್ನು ಸ್ವತಃ ವೀಕ್ಷಿಸಿ ವೃದ್ಧನ ಪರಿಸ್ಥಿತಿಗೆ ಮರುಗಿದ್ದಾರೆ.
ನಂತರ ಆಶ್ರಮದ ವತಿಯಿಂದ ಒಂದು ಕುಟುಂಬಕ್ಕೆ ಅಗತ್ಯವಾಗುವಷ್ಟು ಅಡುಗೆ ಪಾತ್ರೆಗಳು, ಸ್ಟೀಲ್ ತಟ್ಟೆ-ಲೋಟಗಳು, 20 ಕೆ.ಜಿ. ಅಕ್ಕಿ, ಸಕ್ಕರೆ, ಬೇಳೆ, ರವೆ ಹಾಗೂ ಸಾಂಬಾರು ಪದಾರ್ಥ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಕಿಟ್‌ನ್ನು ವೃದ್ಧ ಚಿಕ್ಕಣ್ಣ ಅವರಿಗೆ ಹಸ್ತಾಂತರಿಸಲಾಯಿತು.
ಇದರ ಜೊತೆಗೆ ನೂತನ ಹೊದಿಕೆ, ಬೆಡ್‌ಶೀಟ್, ಟವೆಲ್, ಪಂಚೆ, ಕಂಬಳಿ ಹಾಗೂ ಬೃಹತ್ ಟಾರ್ಪಾಲಿನ್‌ನ್ನೂ ನೀಡಲಾಯಿತು. ಪುಟ್ಟ ಗುಡಿಸಲಿಗೆ ಟಾರ್ಪಾಲಿನ್ ಅನ್ನು ಅಚ್ಚುಕಟ್ಟಾಗಿ ಹೊದಿಸುವಂತೆ ಗ್ರಾಮಸ್ಥರಿಗೆ ಸ್ವಾಮೀಜಿಯವರು ತಿಳಿಸಿದರು. ವೃದ್ಧನ ಪರಿಸ್ಥಿತಿಯನ್ನು ಕಂಡು ನೂತನ ಪಾದರಕ್ಷೆಯನ್ನೂ ಹಸ್ತಾಂತರಿಸಿದರು.
ಆಶ್ರಮದ ವತಿಯಿಂದ ನೀಡಲಾದ ಈ ಎಲ್ಲಾ ಸಾಮಗ್ರಿಗಳ ಒಟ್ಟು ಮೌಲ್ಯ ಸರಿಸುಮಾರು 12 ಸಾವಿರ ರೂಪಾಯಿಗೂ ಅಧಿಕ ಎಂದು ತಿಳಿಸಲಾಗಿದೆ.
ನೆರವು ಸ್ವೀಕರಿಸಿದ ವೃದ್ಧ ಚಿಕ್ಕಣ್ಣ ಕಣ್ಣೀರಿಡುತ್ತಾ ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ಪಾದಾರವಿಂದಗಳನ್ನು ಹಿಡಿದು ಕೃತಜ್ಞತೆ ಸಲ್ಲಿಸಿದ ದೃಶ್ಯ ಮನಕಲಕುವಂತಿತ್ತು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶ್ರೀ ಪೂಜಾರಪ್ಪ ಅವರು ಸ್ವಾಮೀಜಿಯವರ ಜೊತೆ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮದ ಜನರು ಸ್ವಾಮಿ ಜಪಾನಂದಜೀ ಮಹಾರಾಜ್ ಅವರ ಸೇವಾ ಕಾರ್ಯಕ್ಕೆ ಗೌರವ ಸಲ್ಲಿಸಿ, ಸ್ಥಳೀಯ ದೇವಸ್ಥಾನದಲ್ಲಿ ಫಲ-ಪುಷ್ಪ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು, ಸ್ವಾಮಿ ವಿವೇಕಾನಂದರು ನೀಡಿದ ಬೋಧನೆಗಳನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ತಾವು ಸದಾ ಮಾಡುತ್ತಿದ್ದು, ತಮ್ಮ ಸಂಪೂರ್ಣ ಜೀವನವನ್ನೇ ಸ್ವಾಮಿ ವಿವೇಕಾನಂದರ ಆದರ್ಶಗಳ ಅನುಷ್ಠಾನಕ್ಕೆ ಸಮರ್ಪಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಬಡವರು, ಅಸಹಾಯಕರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಮಾನವೀಯ ಸೇವೆಯ ಮತ್ತೊಂದು ನಿದರ್ಶನಕ್ಕೆ ದವಡಬೆಟ್ಟ ಗ್ರಾಮ ಸಾಕ್ಷಿಯಾಯಿತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading