ಚಿತ್ರದುರ್ಗಮೇ.23:
ಕ್ಷಯರೋಗಕ್ಕೆ ನಿಗದಿತ ಉಚಿತ ಚಿಕಿತ್ಸೆ ಲಭ್ಯವಿದ್ದು, ಆರಂಭದಲ್ಲೇ ರೋಗ ಪತ್ತೆ ಹಚ್ಚಿ ವೈದ್ಯರ ಸಲಹೆಯಂತೆ 6 ರಿಂದ 8 ತಿಂಗಳು ಸರಿಯಾದ ಚಿಕಿತ್ಸೆ ಪಡೆದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಹೌದು, ನಾವು ಖಂಡಿತವಾಗಿಯೂ ಟಿ.ಬಿ.ಯನ್ನು ಕೊನೆಗೊಳಿಸಬಹುದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಾನ್ ಮೈನ್ಸ್ ಆಫ್ ಆರ್. ಪ್ರವೀಣ್ ಚಂದ್ರ ವಲಯದಲ್ಲಿ ಈಚೆಗೆ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕ್ಷಯರೋಗ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಕಾರ್ಮಿಕರು ಹಾಗೂ ಸಿಬ್ಬಂದಿಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.
ಸಿರಿಗೆರೆಯ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಎಸ್. ಪವಿತ್ರ ಮಾತನಾಡಿ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೋಗ ಬಂದ ಮೇಲೆ ಕಷ್ಟಪಡುವುದಕ್ಕಿಂತ, ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹು ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ ಎಂದರು. ಇದೇ ವೇಳೆ, ಈ ಹಿಂದೆ ಕ್ಷಯರೋಗಿಗಳಿಗೆ ಪೌಷ್ಟಿಕಾಂಶದ ಆಹಾರ ಕಿಟ್‍ಗಳನ್ನು ಒದಗಿಸಿದ ಮಾದರಿಯಲ್ಲೇ, ಮುಂದಿನ ದಿನಗಳಲ್ಲೂ ತಾಲೂಕಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕಾಂಶದ ಕಿಟ್‍ಗಳನ್ನು ಒದಗಿಸಲು ಅವರು ಸೂಚಿಸಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ‘ಬೀದಿಯಲ್ಲಿ ತಿಂಡಿ ಕರಿ ಕರಿ, ತಿನ್ನುತ್ತಾರೆ ಜನ ಗರಿಗರಿ… ಬೀಡಿ ಸಿಗರೇಟ್ ಸೇದುತ್ತಾರೆ ಜನ ಫಸ ಫಸ, ತೇಕುತ್ತಾರೆ ಜನ ಗಸಗಸ” ಎಂದು ನುಡಿದ ಅವರು, ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು, ಜಂಕ್ ಫುಡ್, ತಂಪು ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರ ಸೇವನೆಗೆ ಕಡಿವಾಣ ಹಾಕಬೇಕು. ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದು ಕರೆ ನೀಡಿದರು.
ಜಾನ್ ಮೈನ್ಸ್‍ನ ಪ್ರಧಾನ ವ್ಯವಸ್ಥಾಪಕರಾದ ರಾಣಾ ದಿವೆ ಎನ್. ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಾಗೂ ಸಾರ್ವಜನಿಕ ಆರೋಗ್ಯ ಸೇವೆ ನೀಡಲು ನಾವು ಸದಾ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ಶಿಬಿರದಲ್ಲಿ ಕ್ಷಯರೋಗದ ಲಕ್ಷಣಗಳಿದ್ದ 62 ಜನರಿಗೆ ಎಕ್ಸ್-ರೇ ಮಾಡಲಾಗಿದ್ದು, ಅದರಲ್ಲಿ ಅಸಹಜತೆ ಕಂಡುಬಂದ 7 ಜನರನ್ನು ಕಫ ಪರೀಕ್ಷೆ ಹಾಗೂ ಹೆಚ್ಚಿನ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರೊಂದಿಗೆ ಒಟ್ಟು 82 ಜನರಿಗೆ ಅಸಂಕ್ರಾಮಿಕ ರೋಗಗಳ ತಪಾಸಣೆ ನಡೆಸಲಾಗಿದ್ದು, ಇಬ್ಬರಲ್ಲಿ ಹೊಸದಾಗಿ ರಕ್ತದೊತ್ತಡ ಹಾಗೂ ಮೂವರಲ್ಲಿ ಮಧುಮೇಹ ಪತ್ತೆಯಾಗಿದ್ದು, ತಕ್ಷಣವೇ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಜಾನ್ ಮೈನಿಂಗ್ ವ್ಯವಸ್ಥಾಪಕ ಅಜಿತ್ ಕುಮಾರ್ ಮಾಳಿ, ಉಪ ವ್ಯವಸ್ಥಾಪಕ ಸಿಸುಭಾಷ್, ಸಹಾಯಕ ವ್ಯವಸ್ಥಾಪಕ ಬಿ.ವಿ. ದರ್ಶನ್, ಪ್ರಯೋಗಶಾಲಾ ಮೇಲ್ವಿಚಾರಕ ಮಾರುತಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮಹೇಂದ್ರ, ಎಚ್.ಐ.ಓ. ಏಕಾಂತ್ ಕುಮಾರ್, ಸೈಯದ್ ಇಸ್ಮಾಯಿಲ್, ಹಾಲನಾಯ್ಕ, ಎಸಿಎಫ್ ಸಂಯೋಜಕ ಹರೀಶ್, ಸಿ.ಎಚ್.ಓ.ಗಳಾದ ಶಿವಕುಮಾರ್ ಮತ್ತು ಪುನೀತ್, ಎಕ್ಸರೇ ತಂತ್ರಜ್ಞೆ ಸೌಮ್ಯ ಸೇರಿದಂತೆ ಆರೋಗ್ಯ ಇಲಾಖೆಯ ಹಾಗೂ ಮೈನ್ಸ್ ಸಂಸ್ಥೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.