ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ವಿದ್ಯುತ್ ವಿತರಣಾ ಪರವಾನಗಿಯನ್ನು ಟಾಟಾ ಪವರ್ ಕಂಪನಿಗೆ ನೀಡಬಾರದು ಹಾಗೂ ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಗೊಳಿಸಬಾರದು ಎಂದು ಆಗ್ರಹಿಸಿ ಬೆಸ್ಕಾಂ ನೌಕರರ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ನೌಕರರು ವಿದ್ಯುತ್ ಖಾಸಗೀಕರಣ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಂತರ ಬೆಲಗೂರು ಗ್ರಾಮಕ್ಕೆ ತೆರಳಿ ಶಾಸಕ ಬಿ.ಜಿ. ಗೋವಿಂದಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನೇತೃತ್ವ ವಹಿಸಿ ಮಾತನಾಡಿದ ಬೆಸ್ಕಾಂ ಎಇಇ ಕಿರಣ್ ರೆಡ್ಡಿ ೨೦೦೩ರ ವಿದ್ಯುತ್ ಕಾಯ್ದೆಯ ಅನ್ವಯ ಪ್ರಸ್ತುತ ಬೆಸ್ಕಾಂ ಸೇವೆ ಸಲ್ಲಿಸುತ್ತಿರುವ ಪ್ರದೇಶಗಳಲ್ಲಿ ಪರ್ಯಾಯ ವಿದ್ಯುತ್ ವಿತರಣಾ ವ್ಯವಸ್ಥೆ ನಿರ್ವಹಣೆಗೆ ಟಾಟಾ ಪವರ್ ಕಂಪನಿ ರಾಜ್ಯದ ೧೯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಗೆ ಅನುಮೋದನೆ ದೊರೆತಲ್ಲಿ ರೈತರು, ಗ್ರಾಹಕರು ಹಾಗೂ ವಿದ್ಯುತ್ ನೌಕರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಖಾಸಗೀಕರಣದಿಂದ ವಿದ್ಯುತ್ ಬಿಲ್‌ಗಳಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಕಡ್ಡಾಯವಾಗುವ ಸಾಧ್ಯತೆಯಿದ್ದು, ಇದರಿಂದ ಕೃಷಿ ಕ್ಷೇತ್ರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ ಎಂದರು.
ಈಗಾಗಲೇ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದು, ನೌಕರರು ದಿನ-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದರಿಂದ ನುರಿತ ನೌಕರರ ಉದ್ಯೋಗ ಭದ್ರತೆಗೆ ಧಕ್ಕೆ ಉಂಟಾಗಲಿದೆ.ಆದ್ದರಿAದ ಟಾಟಾ ಪವರ್ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಿ, ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಸಾರ್ವಜನಿಕ ವಲಯದಲ್ಲಿಯೇ ಮುಂದುವರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ವೇಳೆ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್. ಎಲ್. ಧರಣಿ, ಕಾರ್ಯದರ್ಶಿ ಕಿರಣ್ ಕುಮಾರ್, ಬಾಗೂರು ಶಾಖಾಧಿಕಾರಿ ಎಚ್. ಕೆ. ಮಂಜುನಾಥ್, ಎಂ. ಆರ್. ತಿಪ್ಪೇಸ್ವಾಮಿ, ವೈ. ಎನ್. ಹೊಸದುರ್ಗ ಎರಡನೇ ಶಾಖೆಯ ಶಾಖಾಧಿಕಾರಿ ನಾಗರಾಜ್, ಮಾಡದಕೆರೆ ಶಾಖೆ ಶಾಖಾಧಿಕಾರಿ ಆಂಜನೇಯ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಸೇರಿದ್ದಂತೆ ಸಿಬ್ಬಂಧಿ ವರ್ಗದವರು ನೌಕರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.