ಚಿತ್ರದುರ್ಗ : ನಗರದ ಪತ್ರಿಕಾಭವನದ ಅಂಬೇಡ್ಕರ್ ಸಭಾಂಗಣದಲ್ಲಿ
ಶ್ರೀನಿವಾಸರಾಜು ದೊಡ್ಡೇರಿ ಅನುವಾದಿತ ಆಕಾಶ್ ಸಿಂಗ್ ರಾಥೋಡರ ಡಾ. ಬಿಆರ್ ಅಂಬೇಡ್ಕರ್ ಅವರ ಜೀವನ ಕಥನ “ಬಾಬಾ ಸಾಹೇಬ್” ಪುಸ್ತಕ ಬಿಡುಗಡೆ ಭಾನುವಾರ ಕಾರ್ಯಕ್ರಮ ನೆರವೇರಿತು.
ಬಾಬಾ ಸಾಹೇಬ್ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಚಿಂತಕ, ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ “ಅಂಬೇಡ್ಕರ್ ಅವರನ್ನು ಬಹುರೂಪಿಯಾಗಿ ನೋಡುವಂತಾಗಬೇಕು. ಬಾಬಾ ಸಾಹೇಬ್ ಒಂದು ಅಮೂಲ್ಯ ಕನ್ನಡ ಅವತರಣಿಕೆಯ ಪುಸ್ತಕವಾಗಿದ್ದು, ವಿದ್ಯಾರ್ಥಿಗಳು ಈ ಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಓದುವಂತಾಗಬೇಕು. ದಲಿತ ಚಳವಳಿಯ ಒಡಲು ಮೈದಾ ಹಿಟ್ಟಿನಂತಾಗಿದ್ದು ಅದನ್ನು ವರ್ತಮಾನದಲ್ಲಿ ಕರಗದ ಹೆಬ್ಬಂಡೆಯಾಗಿ ನೋಡುವಂತಾಗಬೇಕು ಎಂದು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಏಕಶೀಲ ಆಕೃತಿಗೆ ತರಲಾಗುತ್ತಿರುವ ಈ ಕಾಲಘಟ್ಟದಲ್ಲಿ ಅವರನ್ನು ಬಹುರೂಪಿಯಾಗಿ ರೂಪಿಸುವ ಜವಾಬ್ದಾರಿ ಪ್ರಜ್ಞಾವಂತ ಸಮಾಜದ್ದಾಗಿದೆ.
ಈ ಕೃತಿಯಲ್ಲಿ ಅಂಬೇಡ್ಕರ್ ಅವರನ್ನು ಚೂರ್ಣದ ರೂಪದಲ್ಲಿ ನಮಗೆ ನೀಡಿದ್ದು ಇದನ್ನು ಹಣೆಗೆ ಇಟ್ಟುಕೊಂಡರೂ ನಾಲಿಗೆಗೆ ರುಚಿಸಿಕೊಂಡರೂ ಕೃತಿಯ ಬೌದ್ಧಿಕ ಸೌಷ್ಠವ ನಮಗೆ ದಕ್ಕುತ್ತದೆ. ಮುಂಬೈಯಿಂದ ಲಂಡನ್ ಹೊರಗಿನ ಪಯಣವನ್ನು ಹೋರಾಟಗಳ ಮೂಲಕ ಕ್ರಮಿಸಿದ ಬಗೆ ಮತ್ತು ಅವರು ದರ್ಶಿಸಿ ಕೊಟ್ಟ ಕಾಣ್ಕೆ ನಮಗೆ ಸಿಕ್ಕುತ್ತದೆ.
ಬಾಬಾ ಸಾಹೇಬರು ಒಬ್ಬ ಪ್ರವಾದಿ, ವಿಮೋಚಕವಾಗುವ ರೀತಿಯಲ್ಲಿ ಬೆಳೆದು ಬಂದ ಬಗೆಯನ್ನು ಕೃತಿಯುದ್ದಕ್ಕೂ ಕಾಣಬಹುದಾಗಿದೆ.
ನಾವು ನಮ್ಮ ಐಡೆಂಟಿಟಿಯನ್ನು ಕಳೆದುಕೊಂಡು ನಿಂತಾಗ ಮಾತ್ರ ವರ್ತಮಾನವನ್ನು ಎದುರುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಚಿಂತಕ ರಾಜೇಂದ್ರ ಚೆನ್ನಿ ಮಾತನಾಡಿ
ಪ್ರಬಲ ಸಮುದಾಯಗಳು ಯಾವಾಗಲೂ ಸಮಾಜದಲ್ಲಿ ಸುಸ್ಥಿತಿಯಲ್ಲಿ ಇರಲು ಬಯಸುತ್ತಾರೆ. ಇದಕ್ಕೆ ಈ ಹಿಂದಿನಿಂದಲೂ ಬಲಿಯಾದವರು ಶೋಷಿತರು, ಹಾಗಾಗಿಯೇ ಅಂಬೇಡ್ಕರ್ ಚಿಂತನೆ ಒಂದು ಬಿಕಮಿಂಗ್, ಈ ಅನುವಾದದ ಕೃತಿಯಲ್ಲಿ ಪ್ರತಿ ಓದುಗರು ಕೂಡ ನಾನು ಹೇಗೆ ಬದಲಾಗಬೇಕು ಹಾಗೂ ಪ್ರಜ್ಞಾವಂತ ರಾಗಬೇಕು ಎಂದು ವಿಮರ್ಶೆಗೆ ಒಳಗಾಗಬೇಕಿದೆ. ಬ್ರಿಟಿಷ್ ಸೈನ್ಯ ಮೂಲಕ ಅಂಬೇಡ್ಕರ್ ಕುಟುಂಬದ ಮೂರು ತಲೆಮಾರು ಶಿಕ್ಷಣ ಕುಟುಂಬವಾಗಿತ್ತು. ಅದರಿಂದಲೇ ಅವರು ತಮ್ಮ ಧ್ಯೇಯ ವಾಕ್ಯದಲ್ಲಿ ಮೊದಲಿಗೆ ಶಿಕ್ಷಣ ಎಂದು ಕರೆ ನೀಡಿದರು. ನಾವು ಸಮಾಜಕ್ಕೆ ಸೇರಿಲ್ಲವೇ ಎನಿಸಿದಾಗ ದಲಿತ ಎನ್ನುವ ಭಾವನೆ ಬರುತ್ತದೆ. ಇದನ್ನು ಅಂಬೇಡ್ಕರ್ ನಿರಂತರವಾಗಿ ಅನುಭವಿಸಿದರು. ಇದರ ವಿರುದ್ಧ ಭಾರತದ ಸಂತ ಪರಂಪರೆಯ ಸಮಾನತೆಯನ್ನು ಅಂಬೇಡ್ಕರ್ ಗುರುತಿಸಿ ಒಳಗೊಳ್ಳುತ್ತಾರೆ. ಶೋಷಿತ, ದಲಿತ ಸಮುದಾಯ, ತಳಮಟ್ಟದಿಂದ ಬಂದು ವಿಶ್ವ ಜ್ಞಾನದ ವಿದ್ವತ್ತನ್ನು ಪಡೆದುದು ಅಂಬೇಡ್ಕರರ ಬಹುದೊಡ್ಡ ಸಾಧನೆ ಎಂದು ಬಣ್ಣಿಸಿದರು.
ಅಂಬೇಡ್ಕರ್ ಅವರು ಯಾವುದೇ ಸಂಘರ್ಷ ಗಳಿಲ್ಲದೇ ಚವಾಡ್ ಕೆರೆಯಲ್ಲಿ ನೀರನ್ನು ಮೊದಲಿಗರಾಗಿ ಕುಡಿದು ಜಗತ್ತಿನ ಸಾಮಾಜಿಕ ಪದ್ಧತಿಗೆ ಮತ್ತು ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಒಂದು ತಿರುವು ನೀಡಿದರು. ಈ ಘಟನೆಯನ್ನು ದಲಿತರು ಶೋಷಿತರು ತಮ್ಮ ರಾಜಕೀಯ ಹಕ್ಕು ಹಾಗೂ ಸಮಾನತೆಗಳನ್ನು ಮಂಡಿಸುವ ಒಂದು ಘಟನೆಯಾಗಿ ರೂಪಗೊಂಡಿತು ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಅಂಬೇಡ್ಕರ್ ಹಲವು ಬಾರಿ ದಲಿತರನ್ನು ರಾಜಕೀಯವಾಗಿ ಯಾರು ಪ್ರತಿನಿಧಿಸುತ್ತಾರೆ ಎನ್ನುವ ಪ್ರಶ್ನೆ ಎತ್ತಿದ್ದಾರೆ. ದಲಿತರನ್ನು ಸಮಾಜದಿಂದ ಹೊರಗಿಟ್ಟಿರುವ ಹಿಂದುಗಳು ಹಾಗೂ ಸನಾತನಗಳು ಪ್ರತಿನಿಧಿಸುವುದಕ್ಕೆ ಅವರ ವಿರೋಧವಿತ್ತು. ದಲಿತರೆ ದಲಿತರನ್ನು ಪ್ರತಿನಿಧಿಸಬೇಕೆಂದು ಅವರ ಸಮರ್ಥನೆ ಇತ್ತು ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಕೇವಲ ಜಾತಿಯ ನಾಯಕನಲ್ಲ ಅವರು ಎಲ್ಲಾ ವರ್ಗದ ನಾಯಕರಾಗಿ ಗುರುತಿಸಿಕೊಂಡವರು. ಗಾಂಧಿ ರಾಷ್ಟ್ರ, ರಾಷ್ಟ್ರೀಯತೆ ಸ್ವಾತಂತ್ರ್ಯ ಎಂದು ಹೋರಾಟ ಮಾಡುತ್ತಿದ್ದಾಗ ಅಂಬೇಡ್ಕರ್, ನಮಗೆ ದೇಶದಲ್ಲಿ, ಸ್ವಾತಂತ್ರ್ಯ, ಭೂಮಿ ಇಲ್ಲ. ನಾವು ಎ ಪಾರ್ಟ್ ಆಫ್ ಅಪಾರ್ಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು.
ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಮೂಲಭೂತವಾದಿಗಳ ಕ್ರೌರ್ಯ ಹಿಂಸೆ ಆವರಿಸಿಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲಿ ಅದಕ್ಕೆ ಉತ್ತರವನ್ನು ಅಂಬೇಡ್ಕರ್ ಚಿಂತನೆಗಳು ಮತ್ತು ಅವರ ಬದುಕು ನೀಡುತ್ತದೆ. ಇದೇ ಸ್ಥಿತಿ ಭಾರತದಲ್ಲಿಯೂ ಇದೆ. ನಾವು ಇಂದು ಪ್ರಪಾತದ ಅಂಚಿನಂತಿದ್ದೇವೆ. ಇದಕ್ಕೆ ಉತ್ತರ ಕೊಂಡುಕೊಳ್ಳಬೇಕಾದರೆ ನಮ್ಮ ಬುದ್ಧಿಯ ಸಂಕೋಲೆಗಳನ್ನು ಕಳಚಿ, ಅಂಬೇಡ್ಕರ್ ಚಿಂತನೆಗಳಲ್ಲಿ ತಿಳಿದುಕೊಳ್ಳಬೇಕಾಗಿದೆ. ಹಾಗಾಗಿ ಇಂತಹ ಪುಸ್ತಕಗಳ ಮೂಲಕ ಅಂಬೇಡ್ಕರ್ ಚಿಂತನೆಗಳನ್ನು ಸಮಾಜದ ಶೋಷಿತ ವರ್ಗಗಳ ಜನರಿಗೆ ರೈತರಿಗೆ ಮಹಿಳೆಯರಿಗೆ ಕಾರ್ಮಿಕರಿಗೆ ತಲುಪಿಸಬೇಕಾಗಿದೆ ಎಂದು ಕರೆ ನೀಡಿದರು.
ಪ್ರಾಧ್ಯಾಪಕ ಬಿಎಲ್ ರಾಜು ಮಾತನಾಡಿ,
70 ವರ್ಷಗಳಿಂದ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಧನಂಜಯ್ ಕೀರ್ ರಂತಹ ಪುಸ್ತಕಗಳ ಮೂಲಕ ನೋಡಲಾಗುತ್ತದೆ. ಅದರಲ್ಲಿ ಸಾವರ್ಕರ್ ಮತ್ತು ಅಂಬೇಡ್ಕರ್ ನಡುವೆ ಸ್ನೇಹ ಮತ್ತು ಪತ್ರ ವ್ಯವಹಾರ ಇತ್ತು ಎಂದು ಹೇಳುತ್ತಾರೆ. ಆದರೆ ಆಕಾಶ್ ರಾಥೋಡ್ ಇದನ್ನು ನಿರಾಕರಿಸಿ ಇಬ್ಬರ ಮಧ್ಯೆ ಮೂಲಭೂತ ವ್ಯತ್ಯಾಸಗಳಿವೆ ಎಂದು ಪ್ರತಿಪಾದಿಸುತ್ತಾರೆ. ಅಂಬೇಡ್ಕರ್ ಎನ್ನುವ ಹೆಸರನ್ನು ಒಬ್ಬ ಬ್ರಾಹ್ಮಣ ಮೇಷ್ಟ್ರು ನೀಡಿದ್ದು ಎಂದು ನಿರಾಕರಿಸಿ ಅಂಬಾವಾಡೇಕರ್ ಎಂದು ಮೊದಲಿನಿಂದಲೂ ಇತ್ತು ಎಂದು ನಿರೂಪಿಸುತ್ತಾ ಹೋಗುತ್ತಾರೆ. ಅಂಬೇಡ್ಕರ್ ಹೋದಲ್ಲೆಲ್ಲಾ ಸಂಶೋಧನೆ ಮಾಡಿ ಅನೇಕ ವಿಷಯಗಳನ್ನು ಬರೆದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ದಲಿತ ಸಮುದಾಯದವರಾಗಿ ಶಿಕ್ಷಣ ಪಡೆದು ವಿಶ್ವ ಮಟ್ಟದ ನಾಯಕನಾಗಿ ಬೆಳೆಯುವುದರ ಹಿಂದೆ, ಅವರ ಸಾಧನೆ ಹಿಂದೆ, ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಅವರ ಆಲೋಚನಾ ಕ್ರಮಗಳನ್ನು ಬದಲಾಯಿಸಿದ್ದು ಯಾರು ಯಾರು ಎನ್ನುವ ಬಗ್ಗೆ ಬರೆಯುತ್ತಾರೆ. ಸಮಾಜದ ಅವಮಾನಗಳನ್ನು ಮೀರಿ ಹೇಗೆ ಬೆಳೆದರು ಎಂಬುದನ್ನು ರಾಥೋಡ್ ಬರೆದಿದ್ದು, ಆಕಾಶ್ ಸಿಂಗ್ ರಾಥೋಡರ ಕೃತಿಯನ್ನು ಕನ್ನಡದ ನೆಲಕ್ಕೆ ತಕ್ಕಂತೆ ಅನುವಾದಿಸಿರುವುದು ಲೇಖಕರ ಸಾಧನೆ. ಈ ಕೃತಿ ಓದುವಾಗ ಬಾಬಾ ಸಾಹೇಬ್ ಬದಲು ಮೇಕಿಂಗ್ ಬಾಬಾ ಸಾಹೇಬ್ ಎನಿಸುತ್ತದೆ. ಅಂಬೇಡ್ಕರರು ಆರು ಬಾರಿ ಕರ್ನಾಟಕಕ್ಕೆ ಬಂದಿದ್ದು ಸೇರಿದಂತೆ ಭಾರತದ ಪ್ರಪಂಚದಾದ್ಯಂತ ಪ್ರಯಾಣ ಮಾಡಿ ವಸ್ತು ಸ್ಥಿತಿಯನ್ನು ಅರಿಯುವಲ್ಲಿ ಹಾಗೂ ಅವಮಾನಿಸಿದ ಅನೇಕ ಸನ್ನಿವೇಶಗಳು ಅಂಬೇಡ್ಕರ್ ಅವರನ್ನು ಮಾನವೀಯ ವ್ಯಕ್ತಿಯಾಗಿ ರೂಪಿಸಿದವು. ಇಂತಹ ಅನೇಕ ಅಧಿಕೃತ ದಾಖಲೆಗಳ ಮೂಲಕ ಕೃತಿ ಅಂಬೇಡ್ಕರರನ್ನು ಗುರುತಿಸಿದೆ. ಅಂಬೇಡ್ಕರ್ ರನ್ನು “ಆಧುನಿಕ ಭಾರತದ ನಿರ್ಮಾತೃ” “ಭಾರತದ ವಿಮೋಚನಾ ಚಿಂತಕ” ಎಂದು ಕರೆಯಬೇಕಿದೆ. ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಒಂದು ನಿರಂತರ ಪ್ರಕ್ರಿಯೆ. ಹಾಗಾಗಿ ಅವರ ಬಗ್ಗೆ ಇಂದಿನ ದಿನಮಾನಗಳಲ್ಲಿ ಅನೇಕ ಕೃತಿಗಳು ರಚನೆಯಾಗುತ್ತಿವೆ. ಅಂಬೇಡ್ಕರ್ ಎನ್ನುವುದು ಬಹು ದೊಡ್ಡ ವಿದ್ಯಮಾನ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅಂದು ಎದುರಿಸಿದ್ದ ಪ್ರಶ್ನೆ ನೀನು ಯಾರು? ಎಂದು. ಈ ಪ್ರಶ್ನೆಯನ್ನು ಇಂದಿಗೂ ದಲಿತ ಸಮುದಾಯಗಳು ಎದುರಿಸುತ್ತಿವೆ ಅದಕ್ಕೆ ಉತ್ತರ ಇಂದಿಗೂ ಕೂಡ ಸಿಕ್ಕಿಲ್ಲ. ಕುಡಿಯುವ ನೀರಿಗಾಗಿ ಚಳುವಳಿ ನಡೆದಿದ್ದರೆ ಅದು ಭಾರತದಲ್ಲಿ ಮಾತ್ರ, ದಲಿತ ಸಮುದಾಯಗಳು ಅಂಬೇಡ್ಕರ್ ಚಿಂತನೆಗಳನ್ನು ಅರಿತು ಪ್ರಜ್ಞಾವಂತರಾಗಬೇಕು. ಶ್ರೀನಿವಾಸ ಅವರ ಅನುವಾದಿತ ಬಾಬಾ ಸಾಹೇಬ್ ಇದಕ್ಕೆ ಒಂದು ದಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಲೇಖಕ ಶ್ರೀನಿವಾಸ್ ದೊಡ್ಡೇರಿ ಮಾತನಾಡಿ “ಈ ಕೃತಿಯ ಯಶಸ್ವಿ ಅನುವಾದಕ್ಕೆ ಕೋಟಗನಹಳ್ಳಿ ರಾಮಯ್ಯ ಪುಸ್ತಕಗಳು, ರಾಜೇಂದ್ರ ಚೆನ್ನಿ ಅವರ ದೊಡ್ಡ ಮರ ಕಥೆಗಳು ಸೇರಿದಂತೆ ಹಲವಾರು ಕಥೆ ಕವನ ಮತ್ತು ಲೇಖನಗಳು, ಭಾಷಣಗಳು ಸ್ಪೂರ್ತಿಯಾಗಿವೆ. ಅನುವಾದಕತ್ವ, ಸಂಪಾದಕತ್ವ ಸಮಾಜದ ಚಿಂತನೆಗೆ ಬಹು ಮುಖ್ಯ. ಮುಂದಿನ ದಿನಗಳಲ್ಲಿ ಬಾಬಾ ಸಾಹೇಬರನ್ನು ಇನ್ನಷ್ಟು ಅನುವಾದಿತ ಹಾಗೂ ಪುಸ್ತಕಗಳ ಮೂಲಕ ತರ್ಕ ಬದ್ಧವಾಗಿ ಕನ್ನಡಕ್ಕೆ ತರಬೇಕಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯರಾದ ಡಾ.ಆರ್ ಮಮತಾ ಏಳಂಜಿ,ರಮಬಾಯಿ ಮಹಿಳಾ ಒಕ್ಕೂಟದ ವಿಜಯಶ್ರೀ ಡಿ, ಆಕೃತಿ ಪ್ರಕಾಶನದ ಗುರುಪ್ರಸಾದ್, ವಿನ್ಯಾಸಕ ವಿಷ್ಣು ಕುಮಾರ್, ಚಿಂತಕರಾದ ಯಾದವರೆಡ್ಡಿ, ಹಿರಿಯ ದಲಿತ ಹೋರಾಟಗಾರರಾದ ಚಿಂತಕ ಸಿ ಕೆ ಮಹೇಶ್ವರಪ್ಪ,ಚಳ್ಳಕೆರೆಯ ಮೈತ್ರಿ ದ್ಯಾಮಣ್ಣ, ಅಂಬೇಡ್ಕರ್ ವಿಚಾರ ವೇದಿಕೆಯ ಡಾ. ವೇದಾಂತ್ ಎಳಂಜಿ, ಕೆ ಸಿದ್ದೇಶ್, ಪ್ರಕಾಶ್ ಯಾದಲಗಟ್ಟ, ಶಿವಶಂಕರ್ ಸೀಗೆಹಟ್ಟಿ, ಮೋದೂರು ತೇಜ, ವಿಶ್ವಾನಂದ , ರಮೇಶ್ಕ್ಯಾಸಾಪುರ , ಸಿದ್ದಪ್ಪ, ರಾಜು, ಸೀನಪ್ಪ ಭೀಮರಾಜು, ಕಿರಣ್, ಹನುಮಂತ, ಮಂಜುನಾಥ್ ಆರ್ ಡಾ.ಕುಮಾರ್ ಸೇರಿದಂತೆ ಅನೇಕ ಆಸಕ್ತರು ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಡಾ: ವೇದಾಂತ ಏಳಂಜಿ ಸ್ವಾಗತಿಸಿ, ಸಿದ್ದೇಶ್ ಕೆ ನಿರೂಪಿಸಿ ಯಾದಲಗಟ್ಟೇ ಪ್ರಕಾಶ ವಂದಿಸಿದರು.
About The Author
Discover more from JANADHWANI NEWS
Subscribe to get the latest posts sent to your email.
