ನಾಯಕನಹಟ್ಟಿ: ತಳಕು ಗ್ರಾಮದಲ್ಲಿ ನಡೆದ ಎಲ್.ಜಿ. ಹಾವನೂರು ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಮನ್ನೆಕೋಟೆ ಗ್ರಾಮದ ಎಂ.ಎಸ್. ರವೀಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಮಿತಿಯ ಉದ್ಘಾಟನೆ, ಕಚೇರಿ ಆರಂಭ, ವೇದಿಕೆ ಕಾರ್ಯಕ್ರಮ ಹಾಗೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬೇಕಾದ ಸಂಘಟನಾತ್ಮಕ ಚಟುವಟಿಕೆಗಳ ರೂಪುರೇಷೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷರು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದರೂ, ಸಮುದಾಯದ ಹಿತಾಸಕ್ತಿ ಹಾಗೂ ಅಭಿವೃದ್ಧಿಗಾಗಿ ಬಲಿಷ್ಠ ಸಂಘಟನೆ ರೂಪುಗೊಂಡಿಲ್ಲ. ಗ್ರಾಮಗಳಲ್ಲಿ ಕೇವಲ ಆಚರಣೆಗೆ ಸೀಮಿತವಾಗಿ ಜಯಂತಿಗಳನ್ನು ನಡೆಸಲಾಗುತ್ತಿದೆಯೇ ಹೊರತು, ಸಮುದಾಯದ ಜನರಲ್ಲಿ ನಿರೀಕ್ಷಿತ ಮಟ್ಟದ ಒಗ್ಗಟ್ಟು ಮತ್ತು ಸಂಘಟನಾ ಶಕ್ತಿ ಬೆಳೆದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮುದಾಯದ ಜನರನ್ನು ಒಗ್ಗೂಡಿಸಿ ಶೈಕ್ಷಣಿಕ, ಆರೋಗ್ಯ, ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಪ್ರೋತ್ಸಾಹಿಸುವುದು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿದ ಎಲ್.ಜಿ. ಹಾವನೂರು ಅವರು ನಮ್ಮ ಸಮಾಜದ ಹೆಮ್ಮೆಯ ಮೇರು ವ್ಯಕ್ತಿತ್ವವಾಗಿದ್ದಾರೆ. ವಕೀಲ ವೃತ್ತಿಯಿಂದ ಸಾರ್ವಜನಿಕ ಜೀವನ ಆರಂಭಿಸಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ, ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿ ಅನೇಕ ಹಿಂದುಳಿದ ವರ್ಗಗಳ ಜನರಿಗೆ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ ಎಂದು ಸ್ಮರಿಸಿದರು.
ಇಂತಹ ಮಹಾನ್ ವ್ಯಕ್ತಿತ್ವವನ್ನು ಹೊಂದಿದ್ದ ಎಲ್.ಜಿ. ಹಾವನೂರು ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ನಮ್ಮ ಸಮುದಾಯದ ಜನರೇ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂಬ ನೋವು ಇಂದಿಗೂ ಕಾಡುತ್ತಿದೆ. ಅವರ ಹೋರಾಟದ ಆಶಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದರ ಜೊತೆಗೆ ಸಮುದಾಯದ ಸಂಘಟನೆ ಮತ್ತು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಪಾಪೇಶ್ ನಾಯಕ, ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಉಪಾಧ್ಯಕ್ಷರಾದ ಪ್ರಹ್ಲಾದ್ ಭೋಗನಹಳ್ಳಿ, ಚಂದ್ರಣ್ಣ ಉಳ್ಳಾರ್ತಿ, ರಂಗಸ್ವಾಮಿ ಕಾಲುವೆಹಳ್ಳಿ, ತಳಕು ತಾತಣ್ಣ, ಹೊಸಹಳ್ಳಿ ವೈ. ಗುರುಮೂರ್ತಿ, ಪಾಲಣ್ಣ ರೇಣುಕಾಪುರ, ತಳಕು ವೀರೇಶ್, ಪಾಲನಾಯಕ, ಗುಡಿಹಳ್ಳಿ ಮಂಜು, ಹೊಸಹಳ್ಳಿ ಮಲ್ಲಿಕಾರ್ಜುನ, ಮನ್ನೆಕೋಟೆ ತಿಪ್ಪೇರುದ್ರಪ್ಪ, ಸೂರ ಸ್ವಾಮಿ, ಚಿಕ್ಕಮ್ಮನಹಳ್ಳಿ ಸೂರಯ್ಯ, ಕಾಟಯ್ಯ, ಮಲ್ಲಸಮುದ್ರ ಮಹಾಂತೇಶ್, ಭೋಗನಹಳ್ಳಿ ಆಂಜನೇಯ, ತಿಪ್ಪೇಸ್ವಾಮಿ, ಓಬಯ್ಯನಹಟ್ಟಿ ಪರಮೇಶ್ವರಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.
