ಚಿತ್ರದುರ್ಗ, ಜು. 12: ಭದ್ರ ಮೇಲ್ದಂಡೆ ಯೋಜನೆ ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾಗಿದ್ದು, ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ವಿರುದ್ಧ ಪತ್ರಕರ್ತರು, ರೈತರು ಹಾಗೂ ಜನಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ ಕರೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಭದ್ರ ಮೇಲ್ದಂಡೆ ಯೋಜನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಜನರು ದಶಕಗಳಿಂದ ನೀರಿನ ಅಭಾವದಲ್ಲೇ ಬದುಕು ಸಾಗಿಸುತ್ತಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಭದ್ರ ಮೇಲ್ದಂಡೆ ಯೋಜನೆ ತ್ರಿಶಂಕು ಸ್ಥಿತಿಗೆ ತಲುಪಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಪತ್ರಕರ್ತರ ಜವಾಬ್ದಾರಿ ಕೇವಲ ಸುದ್ದಿಗಳನ್ನು ಪ್ರಕಟಿಸುವುದಲ್ಲ. ಜನರ ಸಮಸ್ಯೆಗಳಿಗೆ ಧ್ವನಿಯಾಗಿ ನ್ಯಾಯ ದೊರಕಿಸುವ ಕೆಲಸವನ್ನೂ ಮಾಡಬೇಕು. ನೆಲ ಮತ್ತು ಜಲದ ಹಕ್ಕಿನ ಪ್ರಶ್ನೆಯಲ್ಲಿ ಪತ್ರಕರ್ತರು ಮುಂಚೂಣಿಯಲ್ಲಿ ನಿಂತು ಜನಾಂದೋಲನ ರೂಪಿಸಬೇಕು. ಭದ್ರ ಯೋಜನೆ ಪೂರ್ಣಗೊಳ್ಳುವವರೆಗೆ ಹೋರಾಟ ನಿರಂತರವಾಗಬೇಕು” ಎಂದು ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಭದ್ರ ನೀರು ತಲುಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಗ್ಯಾರಂಟಿ ಯೋಜನೆಗಳಿಗಿಂತ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಿದರೆ ರೈತರ ಬದುಕು ಸುಧಾರಿಸುತ್ತದೆ. ಜಿಲ್ಲೆಯ ಜನರಿಗೆ ಬಾಟಲಿ ನೀರಲ್ಲ, ಭದ್ರದ ನೀರೇ ಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ತೊಡರನಾಳ್ ಮಾತನಾಡಿ, ಪತ್ರಕರ್ತರ ಸಂಘವು ಪತ್ರಕರ್ತರ ಸಮಸ್ಯೆಗಳ ಜೊತೆಗೆ ರೈತರ ಬದುಕಿನ ಪ್ರಶ್ನೆಗಳಿಗೂ ಧ್ವನಿಯಾಗಲಿದೆ. ಜಿಲ್ಲೆಯ ನೀರಿನ ಹಕ್ಕಿಗಾಗಿ ಸಂಘ ಸಕ್ರಿಯವಾಗಿ ಹೋರಾಟದಲ್ಲಿ ಭಾಗವಹಿಸಲಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಮಾತನಾಡಿ, ಭದ್ರ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಿದ ಅನುಭವವನ್ನು ಹಂಚಿಕೊಂಡರು. ಜಿಲ್ಲೆ ಪ್ರತಿ ಹತ್ತು ವರ್ಷಗಳಲ್ಲಿ ಐದು ವರ್ಷ ಬರ ಅನುಭವಿಸುತ್ತಿದ್ದು, ಯೋಜನೆ ಪೂರ್ಣಗೊಂಡು ಗೋನೂರು ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ನೀರು ಹರಿದರೆ ಸಾವಿರಾರು ರೈತರ ಬದುಕಿಗೆ ಆಸರೆಯಾಗಲಿದೆ ಎಂದು ಹೇಳಿದರು.
ಭದ್ರ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ರವಿಶಂಕರ್ ಯೋಜನೆಯ ಪ್ರಗತಿ ಕುರಿತು ಮಾಹಿತಿ ನೀಡಿ, 2007ರಲ್ಲಿ ಆರಂಭವಾದ ಯೋಜನೆ ಭೂಸ್ವಾಧೀನ, ಅರಣ್ಯ ಇಲಾಖೆಯ ಅನುಮತಿ ಹಾಗೂ ತಾಂತ್ರಿಕ ಅಡಚಣೆಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು. 34 ಟವರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, ಸುಮಾರು 50 ಕಿ.ಮೀ. ಮುಖ್ಯ ಕಾಲುವೆ ನಿರ್ಮಾಣವಾಗಿದೆ. ಆಗಸ್ಟ್ ವೇಳೆಗೆ ಜಗಳೂರು ಭಾಗದವರೆಗೆ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದರು.
ಯೋಜನೆಯಡಿ ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ 367 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಲಾಗಿದೆ. ಹಿರಿಯೂರು ಹಾಗೂ ಚಳ್ಳಕೆರೆ ಶಾಖಾ ಕಾಲುವೆಗಳ ಮೂಲಕ ಕೆಲವು ಕೆರೆಗಳಿಗೆ ಈಗಾಗಲೇ ನೀರು ಹರಿಸಲಾಗಿದ್ದು, ಉಳಿದ ಕಾಮಗಾರಿಯನ್ನೂ ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಸಂವಾದದಲ್ಲಿ ಪತ್ರಕರ್ತರು, ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ, ಭದ್ರ ಮೇಲ್ದಂಡೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಯೋಜನೆ ಪೂರ್ಣಗೊಳ್ಳುವವರೆಗೆ ಜನಪರ ಹೋರಾಟವನ್ನು ನಿರಂತರವಾಗಿ ಮುಂದುವರಿಸುವ ಸಂಕಲ್ಪವನ್ನೂ ವ್ಯಕ್ತಪಡಿಸಿದರು.








About The Author
Discover more from JANADHWANI NEWS
Subscribe to get the latest posts sent to your email.