ಅಥಣಿ: ತಾಲೂಕಿನ ಕಾಗವಾಡ ತಾಲ್ಲೂಕಿನ ಮೊಳೆ ಗ್ರಾಮದ ಬಸವ ನಗರ ತೋಟದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಋಣ ತೀರಿಸುವ ಮೂಲಕ ಮಾದರಿಯಾಗಿದ್ದಾರೆ.
ಸುಮಾರು 70 ವರ್ಷಗಳ ಬಳಿಕ ಸಂಘಟಿತರಾದ ಹಳೆ ವಿದ್ಯಾರ್ಥಿಗಳು, 2024ರ ಜೂನ್ 16ರಂದು ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿದ್ದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆದ ಬಳಿಕ ಉಳಿದ ಹಣವನ್ನು ಶಾಲೆಯ ಮಕ್ಕಳ ಶಿಕ್ಷಣದ ಅಭಿವೃದ್ಧಿಗೆ ವಿನಿಯೋಗಿಸುವ ನಿರ್ಧಾರ ಕೈಗೊಂಡರು.
ಅದರಂತೆ, ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು 30 ಕಬ್ಬಿಣದ ಡೆಸ್ಕ್‌ಗಳು ಹಾಗೂ ಎರಡು ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೂ ಕಂಪ್ಯೂಟರ್ ಜ್ಞಾನ ಹಾಗೂ ತಂತ್ರಜ್ಞಾನ ಶಿಕ್ಷಣ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಹಳೆ ವಿದ್ಯಾರ್ಥಿಗಳು ನೀಡಿರುವ ಗಣಕಯಂತ್ರಗಳು ಮತ್ತು ಪೀಠೋಪಕರಣಗಳು ವಿದ್ಯಾರ್ಥಿಗಳ ಕಲಿಕೆಗೆ ನೆರವಾಗಲಿವೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಕೈಜೋಡಿಸಿರುವುದು ಇತರರಿಗೂ ಪ್ರೇರಣೆಯಾಗಿದೆ.
ತಾವು ಕಲಿತ ಶಾಲೆಯ ಮೇಲಿನ ಅಭಿಮಾನವನ್ನು ಕಾರ್ಯರೂಪಕ್ಕೆ ತಂದ ಹಳೆ ವಿದ್ಯಾರ್ಥಿಗಳ ಈ ಸೇವೆಗೆ ಶಾಲಾ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ: ಮಹೇಶ್ ಶರ್ಮಾ
About The Author
Discover more from JANADHWANI NEWS
Subscribe to get the latest posts sent to your email.