ಹಿರಿಯೂರು :
ಪತ್ರಿಕೆಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದು, ಸಮಾಜದಲ್ಲಿ ದಿನನಿತ್ಯ ನಡೆಯುವ ಘಟನೆಗಳ ಸುದ್ದಿಗಳನ್ನು ಸಾರ್ವಜನಿಕರಿಗೆ ತಿಳಿಸುವುದರ ಜೊತೆಗೆ ಸಮಾಜದ ಜನರನ್ನು ಜಾಗೃತಿಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಿವೆ, ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದಾಗಿ ಜೆಡಿಎಸ್ ಮುಖಂಡರಾದ ರವೀಂದ್ರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು.


ನಗರದ ರೋಟರಿ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಿತ್ರದುರ್ಗ, ಹಾಗೂ ಹಿರಿಯೂರು ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 2025-2028 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ಲೇಖನಿ ಖಡ್ಗಕ್ಕಿಂತಲೂ ಹರಿತವಾದದು ಎಂಬುದನ್ನು ಪತ್ರಿಕಾರಂಗ ಸಾಬೀತು ಪಡಿಸಿದ್ದು, ಪತ್ರಕರ್ತರು ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನಿಸ್ಪಕ್ಷಪಾತವಾಗಿ ನೇರ ದಿಟ್ಟ ವರದಿಗಳ ಮೂಲಕ ಜನರ ಧ್ವನಿಯಾದರೆ ಇಡೀ ಸಮಾಜವನ್ನು ಬದಲಾಯಿಸಬಹುದು, ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸುತ್ತಿರುವ ಪತ್ರಕರ್ತರುಗಳು ಜನರ ಧ್ವನಿಯಾಗಬೇಕು ಎಂಬುದಾಗಿ ಹೇಳಿದರು.
ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪನವರು ಮಾತನಾಡಿ, ಸಮಾಜದಲ್ಲಿ ಪತ್ರಕರ್ತರು ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಸಾಮಾಜಿಕ ಕಳಕಳಿ ಹೊಂದಿ ಪತ್ರಿಕೋಧ್ಯಮದಲ್ಲಿ ಕೆಲಸ ಮಾಡಬೇಕು, ಯಾರನ್ನೂ ವೈಯಕ್ತಿವಾಗಿ ತೇಜೋವದೆ ಮಾಡುವಂತ ಕೆಲಸ ಮಾಡಬಾರದು, ಸಮಾಜದ ಆಗುಹೋಗುಗಳನ್ನು ಯಥಾವತ್ತಾಗಿ ಪ್ರತಿಬಿಂಬಿಸಬೇಕೇ ಹೊರತು, ವಿಮರ್ಶಕರಾಗಬಾರದು ಎಂದರಲ್ಲದೆ,
ಇದೀಗ ನೂತನ ಅಧ್ಯಕ್ಷರಾದ ಶ್ರೀಯುತ ಎಂ.ಎಲ್.ಗಿರಿಧರ್ ರವರು ಬಹುಮುಖ ಪ್ರತಿಭೆಯಾಗಿದ್ದು, ಆರಂಭದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ, ಚಂದ್ರವಳ್ಳಿಪತ್ರಿಕೆ ವರದಿಗಾರರಾಗಿ ತಮ್ಮ ಸ್ವಂತ ಪರಿಶ್ರಮದಿಂದ ಪತ್ರಿಕಾರಂಗದಲ್ಲಿ ಬೆಳೆದು, ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವುದು ಅತ್ಯಂತ ಸಂತಸ ತಂದಿದೆ, ಕಾರ್ಯದರ್ಶಿ ಚಿದಾನಂದ್ ಸೇರಿದಂತೆ ಉತ್ತಮ ಯುವಕರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಈ ನೂತನ ತಂಡಕ್ಕೆ ಶುಭವಾಗಲಿ ಎಂಬುದಾಗಿ ಹಾರೈಸಿದರು.
ನಗರಸಭೆ ಪೌರಾಯುಕ್ತರಾದ ಎ.ವಾಸೀಂರವರು ಮಾತನಾಡಿ, ಜಿಲ್ಲಾ ಸಚಿವರ ಆಶಯದಂತೆ ನಗರಸಭೆ ವತಿಯಿಂದ ನಗರದ ಪತ್ರಕರ್ತರಿಗೆ ಲ್ಯಾಬ್ ಟಾಬ್ ವಿತರಣೆ ಮಾಡಲಾಗಿದ್ದು, ನಗರದ ನಾಗರೀಕರಿಗೆ ಹಸಿಕಸ-ಒಣಕಸ ನಿರ್ವಹಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಪತ್ರಕರ್ತರ ಸಹಕಾರದಿಂದ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಗಳು ಜನರ ಮನೆ-ಮನಗಳಿಗೆ ತಲುಪುವಲ್ಲಿ ಪತ್ರಕರ್ತರು ನಮಗೆ ನೆರವಾಗಿದ್ದಾರೆ ಎಂದರಲ್ಲದೆ,
ಹೊಳಲ್ಕೆರೆಯಲ್ಲಿ ನಾನು ಕಾರ್ಯ ನಿರ್ವಹಿಸುವಾಗ 3 ರಾಜ್ಯಪ್ರಶಸ್ತಿಗಳನ್ನು ಪಡೆಯಲಾಗಿದ್ದು, ಈ ಪ್ರಶಸ್ತಿಗಳನ್ನು ಪಡೆಯುವಲ್ಲಿ ನನ್ನ ಕಾರ್ಯವೈಖರಿಯನ್ನು ಜನರಿಗೆ ತಿಳಿಸುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ, ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜನರ ಧ್ವನಿಯಾಗಿರುವ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಯಶಸ್ವಿಯಾಗಲಿ ಎಂಬುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿನಾಯಕ ತೊಡರಾಳ್ ಮಾತನಾಡಿ, ಪತ್ರಕರ್ತರ ಸಂಘದ ಪಾದಾಧಿಕಾರಿಗಳಾಗಿ ಆಯ್ಕೆಯಾಗುವುದು ಅಧಿಕಾರವಲ್ಲ, ಅದೊಂದು ಸಮಾಜಿಕ ಜವಾಬ್ದಾರಿಯ ಕೆಲಸವಾಗಿದ್ದು, ಪತ್ರಕರ್ತರು ಈ ಜವಾಬ್ದಾರಿಯನ್ನು ಅತ್ಯಂತ ನಿಸ್ಪಕ್ಷವಾಗಿ ಹಾಗೂ ವಸ್ತುನಿಷ್ಠವಾಗಿ ಕೆಲಸ ನಿರ್ವಹಿಸುವ ಮೂಲಕ ಪತ್ರಿಕಾರಂಗದಲ್ಲಿ ಉತ್ತಮ ಹೆಸರು ಗಳಿಸಬೇಕು ಎಂದರಲ್ಲದೆ,
ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಡಿ.ವಿ.ಜಿಯವರು, ಈಪತ್ರಕರ್ತರ ಸಂಘವನ್ನು ಪ್ರಾರಂಭಿಸಲಾಗಿದ್ದು, ಪತ್ರಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುವ ಹಲವಾರು ಸಂದರ್ಭದಲ್ಲಿ ಹಲವಾರು ಜನರ, ರಾಜಕಾರಣಿಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಕೆಲವು ಸಂದರ್ಭದಲ್ಲಿ ಅವರ ಪ್ರಾಣದಹಂಗು ತೊರೆದು ವರದಿ ಮಾಡಬೇಕಾಗಿರುತ್ತದೆ, ಅಂತಹ ಸಂದರ್ಭದಲ್ಲಿ ಈ ಕಾರ್ಯನಿರತ ಪತ್ರಕರ್ತರ ಸಂಘ ಅವರಿಗೆ ಬೆಂಬಲವಾಗಿರುತ್ತದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ವೀರೇಶ್ ರವರು ಪ್ರಮಾಣವಚನವನ್ನು ಬೋಧಿಸಿದರು.
ಈ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಎಂ.ರವೀಂದ್ರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ವಿನಾಯಕ ತೋಡರನಾಳ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ್, ಜಿಲ್ಲಾ ಉಪಾಧ್ಯಕ್ಷ ಅಹೋಬಲಪತಿ, ರಾಜ್ಯ ಸಮಿತಿ ಸದಸ್ಯ ಸಿದ್ಧರಾಜು, ರಾಷ್ಟ್ರೀಯ ಮಂಡಳಿ ಸದಸ್ಯ ಹೆಂಜಾರಪ್ಪಹರಿಯಬ್ಬೆ, ಕಾರ್ಯಕಾರಿಸಮಿತಿ ಸದಸ್ಯ ಪ್ರಸನ್ನಹುಚ್ಚವ್ವನಹಳ್ಳಿ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಲ್.ಗಿರಿಧರ್, ಕಾರ್ಯದರ್ಶಿ ಚಿದಾನಂದ್, ಹಿರಿಯ ಪತ್ರಕರ್ತರಾದ ಡಾ.ವಿ.ವೀರಣ್ಣ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಪ್ರಕಾಶ್ ಬಬ್ಬೂರ್, ವಿಜಯವಾಣಿ ವರದಿಗಾರ ಬಸವರಾಜ್, ಕನ್ನಡಪ್ರಭ ವರದಿಗಾರ ರಮೇಶ್ ಬಿದರಕೆರೆ, ರಾಜ್ಯ ರೈತಸಂಘದ ವಿಭಾಗೀಯ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ಸಾಮಾಜಿಕ ಹೋರಾಟಗಾರ ಕಸವನಹಳ್ಳಿರಮೇಶ್, ವಾಣಿಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ, ಮನವಿ ಟ್ರಸ್ಟ ಅಧ್ಯಕ್ಷೆ ಶ್ರೀಮತಿ ಮಾನಸ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿರಮೇಶ್, ಜಿ.ಪಂ.ಮಾಜಿ ಸದಸ್ಯ ನಾಗೇಂದ್ರನಾಯ್ಕ್, ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಅಮೃತೇಶ್ವರಸ್ವಾಮಿ, ಪ್ರಜಾವಾಣಿ ವಿತರಕ ನಾಗಣ್ಣ, ಗಜಾನನ, ಕಲಾವಿದರಾದ ಮಾರುತೇಶ್ ಕೂನಿಕೆರೆ, ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಕಾಂಗ್ರೆಸ್ ಮುಖಂಡರುಗಳಾದ ಪ್ರೇಮ್ ಕುಮಾರ್, ಅರುಣ್ ಕುಮಾರ್, ಅಂಬಿಕಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.