October 5, 2026
IMG-20261005-WA0294

ನಾಯಕನಹಟ್ಟಿ: ಹೋಬಳಿಯ ಬೋಸೇದೇವರಹಟ್ಟಿ ಸಮೀಪದ ಶಿಡ್ಲಹಳ್ಳದಿಂದ ದೊಡ್ಡಕೆರೆಗೆ ನೀರು ಹರಿಸುವ ಉದ್ದೇಶದಿಂದ ಸುಮಾರು ₹2 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕಾಲುವೆ ಹಾಗೂ ಚೆಕ್‌ಡ್ಯಾಂ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂಬ ಆರೋಪದ ಕುರಿತು ಬಿಜೆಪಿ ಮುಖಂಡರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚಿನ್ನಗಾನಹಳ್ಳಿ ಮಲ್ಲೇಶ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷ ರೇಣುಕಾಪುರ ಪಾಲಯ್ಯ, ಪ್ರಧಾನ ಕಾರ್ಯದರ್ಶಿ ಮೂರ್ತಿ ಹಾಗೂ ಕಾಲುವೆಹಳ್ಳಿ ಆರ್. ಸ್ವಾಮಿ ಅವರು ಬೆಂಗಳೂರಿನ ಲೋಕಾಯುಕ್ತ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ದೂರನ್ನು ಕಳಪೆ ಕಾಮಗಾರಿ ಆರೋಪದಡಿ ದಾಖಲಿಸಲಾಗಿದೆ.

ಡಿಎಂಎಫ್ ಅನುದಾನದಡಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಯ ಕೆಲ ಭಾಗಗಳಲ್ಲಿ ಕಾಂಕ್ರೀಟ್‌ನ ಗುಣಮಟ್ಟ ಹಾಗೂ ದಪ್ಪದ ಬಗ್ಗೆ ಅನುಮಾನವಿದ್ದು, ಮಳೆ ಹಾಗೂ ನೀರಿನ ಹರಿವಿನಿಂದ ಕಾಮಗಾರಿ ಹಾನಿಗೊಳಗಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಾಮಗಾರಿಯ ಕಾಂಕ್ರೀಟ್ ದಪ್ಪ, ಗುಣಮಟ್ಟ, ಮಿಶ್ರಣದ ಪ್ರಮಾಣ ಹಾಗೂ ಬಳಸಿರುವ ಸಾಮಗ್ರಿಗಳ ತಾಂತ್ರಿಕ ಪರೀಕ್ಷೆ ನಡೆಸಬೇಕು. ಜೊತೆಗೆ ಕಾಮಗಾರಿಗೆ ಸಂಬಂಧಿಸಿದ ಅಂದಾಜು, ತಾಂತ್ರಿಕ ಅನುಮೋದನೆ, ವರ್ಕ್ ಆರ್ಡರ್, ಅಳತೆ ಪುಸ್ತಕ (ಎಂ.ಬಿ.), ಬಿಲ್‌ಗಳು ಹಾಗೂ ಪಾವತಿ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಹಾನಿಗೊಳಗಾದ ಕಾಮಗಾರಿಯ ಭಾಗಗಳನ್ನು ತನಿಖೆ ಪೂರ್ಣಗೊಳ್ಳುವ ಮುನ್ನ ಮರುಕಾಮಗಾರಿ ನಡೆಸಿದರೆ ಸಾಕ್ಷ್ಯಗಳು ಬದಲಾಗುವ ಸಾಧ್ಯತೆ ಇರುವುದರಿಂದ, ತನಿಖೆ ಮುಗಿಯುವವರೆಗೆ ಮರುಕಾಮಗಾರಿ ಸ್ಥಗಿತಗೊಳಿಸಿ ಕಾಮಗಾರಿಯ ಪ್ರಸ್ತುತ ಸ್ಥಿತಿಯನ್ನು ದಾಖಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ಅಧಿಕಾರಿಗಳ ಕರ್ತವ್ಯಲೋಪವಾಗಿದೆಯೇ ಎಂಬುದನ್ನು ಪರಿಶೀಲಿಸಿ, ಸಾರ್ವಜನಿಕ ಹಣದ ದುರುಪಯೋಗ ಅಥವಾ ಅಕ್ರಮಗಳು ದೃಢಪಟ್ಟಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದ್ದರೆ ನಷ್ಟದ ಹಣವನ್ನು ವಸೂಲಿ ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಲೋಕಾಯುಕ್ತವು ದೂರನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖಾ ಕ್ರಮದತ್ತ ಸಾರ್ವಜನಿಕರ ಗಮನ ನೆಟ್ಟಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading