ಹಿರಿಯೂರು: ಉತ್ತಮ ಮಳೆಯಾಗಲೆಂದು ಕೆ.ಕೆ.ಹಟ್ಟಿ ಗ್ರಾಮದ ಗ್ರಾಮಸ್ಥರು ಭಾನುವಾರ ಉತ್ತರೆ ಬೆಟ್ಟದಲ್ಲಿರುವ ಶ್ರೀ ತಿಮ್ಮಪ್ಪನ ದೇವರ ಸನ್ನಿಧಿಗೆ ಪಾದಯಾತ್ರೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಿಗ್ಗೆ 9 ಗಂಟೆಗೆ ಕೆ.ಕೆ.ಹಟ್ಟಿಯಿಂದ ಆರಂಭವಾದ ಪಾದಯಾತ್ರೆ ಮಾದಿಗನ ದೊಣ್ಣೆ ತಲುಪಿತು. ಅಲ್ಲಿ ಗಂಗಾಸ್ಥಾನ ನೆರವೇರಿಸಿ, ದೇವರಿಗೆ ಇಷ್ಟವಾದ ನೈವೇದ್ಯವನ್ನು ಸಿದ್ಧಪಡಿಸಿದ ಬಳಿಕ ಸುಮಾರು ನಾಲ್ಕು ಕಿಲೋಮೀಟರ್ ದೂರದ ತಿಮ್ಮಪ್ಪನ ಗುಡ್ಡಕ್ಕೆ ಪ್ರಕೃತಿಯ ಸೊಬಗಿನ ನಡುವೆ ಪಾದಯಾತ್ರೆ ನಡೆಸಿದರು.
ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಸಮರ್ಪಣೆ ಹಾಗೂ ಪ್ರಸಾದ ಅರ್ಪಿಸಿ, ಉತ್ತಮ ಮಳೆಯಾಗಲಿ, ರೈತರ ಬದುಕು ಸಮೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿದರು. ಬಳಿಕ ಮಾದಿಗನ ದೊಣ್ಣೆಯಲ್ಲಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಮಾತನಾಡಿ, ಬೆಟ್ಟದಲ್ಲಿರುವ ವೈವಿಧ್ಯಮಯ ಮರಗಳು, ಅಪರೂಪದ ಸಸ್ಯಗಳು ಹಾಗೂ ಧೂಪದ ಮರದ ಮಹತ್ವದ ಕುರಿತು ಮಾಹಿತಿ ನೀಡಿದರು. ಪ್ರಕೃತಿಯ ಮಧ್ಯೆ ಕಳೆದ ಕ್ಷಣಗಳು ಜೀವನದ ಅತ್ಯಂತ ಸುಂದರ ಅನುಭವ ಎಂದು ಅವರು ತಿಳಿಸಿದರು.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಗಡಾರಿ ಕಷ್ಟಪ್ಪ ಬೆಟ್ಟದಲ್ಲಿ ಬೆಳೆಯುವ ನೆಲ್ಲಿಕಾಯಿಯ ಔಷಧೀಯ ಮತ್ತು ಪರಿಸರ ಮಹತ್ವವನ್ನು ವಿವರಿಸಿದರು.
ಜಯಪ್ರಕಾಶ್ ಆರ್. ಮಾತನಾಡಿ, ಈ ಬಾರಿ ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂಪ್ರದಾಯದಂತೆ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅವಿನಾಶ್ ಸಿ., ಬಂಡಿ ರಂಗ, ದ್ಯಾಮಣ್ಣ, ಶಶಿಕುಮಾರ್, ಭಾಸ್ಕರ್, ದಿಂಡಾವರ ರಾಜು, ಅಶೋಕ್ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.







About The Author
Discover more from JANADHWANI NEWS
Subscribe to get the latest posts sent to your email.