ಚಳ್ಳಕೆರೆ, : ಕೌಶಲ್ಯವೇ ಉದ್ಯೋಗದ ಕೀಲಿಕೈ ಆಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಮಾತ್ರ ಸಾಲದು; ತಾಂತ್ರಿಕ ಕೌಶಲ್ಯಗಳು ಅತ್ಯಗತ್ಯ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.





ನಗರದ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರದಲ್ಲಿ ನಡೆದ 2025–26ನೇ ಸಾಲಿನ ಡಿ.ಎಂ.ಸಿ.ಹೆಚ್. ಕೋರ್ಸ್‌ನ 51 ವಿದ್ಯಾರ್ಥಿಗಳು ಹಾಗೂ ಡಿ.ಟಿ.ಡಿ.ಎಂ. ಕೋರ್ಸ್‌ನ 43 ವಿದ್ಯಾರ್ಥಿಗಳು ಸೇರಿ ಒಟ್ಟು 94 ವಿದ್ಯಾರ್ಥಿಗಳಿಗೆ ನಿಯೋಜನಾ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆಗೆ ಉದ್ಯೋಗಮುಖಿ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. “ಇಂದಿನ ಯುಗದಲ್ಲಿ ಕೇವಲ ಪದವಿ ಹೊಂದಿರುವುದರಿಂದ ಸಾಕಾಗುವುದಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತಾಂತ್ರಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳು ಅತ್ಯಂತ ಮುಖ್ಯ. ಸರ್ಕಾರಿ ತರಬೇತಿ ಕೇಂದ್ರಗಳು ವಿದ್ಯಾರ್ಥಿಗಳಿಗೆ ಕೈಗಾರಿಕಾ ಜಗತ್ತಿನ ನೈಜ ಅನುಭವವನ್ನು ನೀಡುತ್ತವೆ. ನೀವು ಪಡೆಯುತ್ತಿರುವ ಈ ತರಬೇತಿ ನಿಮ್ಮ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಸ್ತು, ಪರಿಶ್ರಮ ಹಾಗೂ ನಿಷ್ಠೆಯಿಂದ ತರಬೇತಿಯನ್ನು ಪಡೆದು ತಮ್ಮ ಕುಟುಂಬ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಕುಮಾರ್ ಅವರು ಸಂಸ್ಥೆಯ ಸಾಧನೆಗಳು ಹಾಗೂ ತರಬೇತಿ ವ್ಯವಸ್ಥೆಗಳ ಬಗ್ಗೆ ವಿವರಿಸಿ, ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯರಾದ ರಾಘವೇಂದ್ರ, ಮಲ್ಲಿಕಾರ್ಜುನ, ಮುಖಂಡರಾದ ಬೋರಣ್ಣ, ತಿಪ್ಪೇಸ್ವಾಮಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.