ಸಾಣೇಹಳ್ಳಿ, ಏಪ್ರಿಲ್ 28: ಇಲ್ಲಿನ ಎಸ್.ಎಸ್. ರಂಗಮಂದಿರದಲ್ಲಿ ಬಸವ ಜಯಂತಿ ಹಾಗೂ ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 112ನೇ ಜಯಂತಿ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.










ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕೇವಲ ಧರ್ಮಗುರುಗಳಲ್ಲ, ತಾಯಿಯ ಪ್ರೀತಿ ಮತ್ತು ಕಟ್ಟುನಿಟ್ಟಿನ ಶಿಸ್ತನ್ನು ಒಂದೇ ಸಮಯದಲ್ಲಿ ಸಾರಿದ ಮಹಾನ್ ವ್ಯಕ್ತಿತ್ವ ಎಂದು ಕೊಂಡಾಡಿದರು. ಬಸವಣ್ಣನವರ ತತ್ವಗಳನ್ನು ಇಪ್ಪತ್ತೊಂದನೇ ಶತಮಾನದಲ್ಲಿ ನಡೆದು ತೋರಿಸಿದ ಮಹಾನ್ ಚೇತನರು ಅವರು ಎಂದರು.
ಶ್ರೀಗಳ ಜೀವನದಲ್ಲಿ ಗುರುಭಕ್ತಿ ಅಪಾರವಾಗಿದ್ದು, ತಮ್ಮ ಗುರುಗಳಾದ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮೀಜಿಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು. ಕಾಶಿಯಲ್ಲಿ ವಿದ್ಯಾಭ್ಯಾಸದ ಸಮಯದಲ್ಲೂ ಸಂಕಷ್ಟಗಳ ನಡುವೆ ಸಂಸ್ಕೃತದಲ್ಲಿ ಪಾಂಡಿತ್ಯ ಗಳಿಸಿದ ಘಟನೆಗಳನ್ನು ಉಲ್ಲೇಖಿಸಿದರು.
ಉಪನ್ಯಾಸಕರಾಗಿ ಮಾತನಾಡಿದ ದಾವಣಗೆರೆಯ ನಿವೃತ್ತ ಪ್ರಾಚಾರ್ಯ ನಾ. ಲೋಕೇಶ್ ಒಡೆಯರು, ಶ್ರೀಗಳು ಕೇವಲ ಧಾರ್ಮಿಕ ವಲಯಕ್ಕೆ ಸೀಮಿತವಾಗದೇ ಶಿಕ್ಷಣ, ಸಮಾಜ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಮಾರ್ಗದರ್ಶನ ನೀಡಿದ ಮಹಾನ್ ಚೇತನರು ಎಂದು ಹೇಳಿದರು. 1946ರಲ್ಲಿಯೇ ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸುವ ಮೂಲಕ ಗ್ರಾಮೀಣ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಿದರು ಎಂದರು.
ಬಸವಣ್ಣನವರ ‘ಕಳಬೇಡ, ಕೊಲಬೇಡ’ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾತಿ-ಮತ ಭೇದವಿಲ್ಲದ ಸಮಾಜ ನಿರ್ಮಾಣಕ್ಕೆ ಶ್ರೀಗಳು ಶ್ರಮಿಸಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ ಅವರು ರಾಜ್ಯದ ಸುಮಾರು 14 ಜಿಲ್ಲೆಗಳಲ್ಲಿ 230ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿದ್ದಾರೆ.
ಸಾಹಿತಿ ಚಂದ್ರಶೇಖರ ತಾಳ್ಯ ಅವರು ಮಾತನಾಡಿ, ತಮ್ಮ ಸಾಹಿತ್ಯಿಕ ಬೆಳವಣಿಗೆಗೆ ಶ್ರೀಗಳ ಆಶೀರ್ವಾದವೇ ಕಾರಣ ಎಂದು ಭಾವುಕರಾಗಿ ಸ್ಮರಿಸಿದರು. ವಿದ್ಯಾರ್ಥಿ ದಿನಗಳಲ್ಲಿ ಬರೆದ ಲೇಖನವನ್ನು ಮೆಚ್ಚಿ ಪ್ರೋತ್ಸಾಹಿಸಿದ ಶ್ರೀಗಳ ಸರಳತೆ ಮತ್ತು ದಯಾಮಯ ಗುಣಗಳನ್ನು ನೆನಪಿಸಿದರು.
ಕಾರ್ಯಕ್ರಮದಲ್ಲಿ ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿ ರಂಜಿಸಿದರು. ‘ಮಹಾಬೆಳಗು’ ನಾಟಕ ಪ್ರದರ್ಶನವೂ ನಡೆಯಿತು. ಬಳಿಕ ಶ್ರೀಗಳ ರಥೋತ್ಸವ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಸಾಣೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಗುರುಪಾದೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎ.ಸಿ. ಚಂದ್ರಪ್ಪ ಸ್ವಾಗತಿಸಿದರು. ಸಂಧ್ಯಾ ಪಿಎಲ್ ನಿರೂಪಿಸಿ ವಂದಿಸಿದರು. ಮಾಗನೂರು ಚಂದ್ರಶೇಖರ್ ಗೌಡ್ರು ಹಾಗೂ ನಿವೃತ್ತ ಸಿಇಓ ಪ್ರಭುದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.