November 28, 2026
IMG-20261127-WA0491

ಚಿತ್ರದುರ್ಗ: ನಗರದ ಮಹಾತ್ಮ ಫುಲೆ ಅಧ್ಯಯನ ಕೇಂದ್ರದಲ್ಲಿ ಅಂಬೇಡ್ಕರ್ ವಿಚಾರ ವೇದಿಕೆ ಹಾಗೂ ಜಂಬೂದ್ವೀಪ ಕರ್ನಾಟಕ ವತಿಯಿಂದ ಸಂವಿಧಾನ ಸಮರ್ಪಣಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್. ಮಂಜುನಾಥ್ ಅವರು, ಬಾಬಾಸಾಹೇಬರು ಈ ದೇಶದ ಸಕಲ ಜನರ ಶಕ್ತಿಯಾಗಿದ್ದಾರೆ. ಪ್ರತಿಯೊಂದು ಸಮುದಾಯದ ಏಳಿಗೆಗೆ ಅವರು ನೀಡಿದ ಸಂವಿಧಾನವೇ ಸಾಕ್ಷಿಯಾಗಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಎಸ್‌ಸಿಪಿ/ಟಿಎಸ್‌ಪಿ (SCP/TSP) ಅನುದಾನವನ್ನು ಹಲವು ವರ್ಷಗಳಿಂದ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚಂದ್ರಯಾನದಂತಹ ಯೋಜನೆಗಳಿಗೆ ದಲಿತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬಳಕೆಯಾಗುತ್ತಿರುವ ವಿಚಾರವನ್ನು ಇಂದಿನ ಯುವಜನತೆ ಪ್ರಶ್ನಿಸಬೇಕು. ಸಮುದಾಯದ ಹಕ್ಕುಗಳು ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಯುವಕರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ವಕೀಲರು ಹಾಗೂ ಅಂಬೇಡ್ಕರ್‌ವಾದಿ ಚಿಂತಕರಾದ ವಿಶ್ವಾನಂದ ವದ್ದಿಕೆರೆ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ವಿಚಾರವಾಗಿ ಆಧಾರರಹಿತ ಸುಳ್ಳುಗಳನ್ನು ಹರಡಲಾಗುತ್ತಿದೆ. ದುಂಡುಮೇಜಿನ ಪರಿಷತ್ತಿನ ಸಂದರ್ಭದಲ್ಲಿ ಅವರು ಮಂಡಿಸಿದ ವಿಚಾರಗಳು ಹಾಗೂ ರೂಪಿಸಿದ ಕಾನೂನುಗಳ ಆಶಯಗಳು 1935ರ ಕಾಯ್ದೆಯಲ್ಲಿ ಅಪೂರ್ಣವಾಗಿ ಅಳವಡಿಸಲ್ಪಟ್ಟಿದ್ದವು. ಇಂತಹ ಲೋಪದೋಷಗಳಿಗೆ ಸಂವಿಧಾನ ರಚನೆಯ ಮೂಲಕ ಬಾಬಾಸಾಹೇಬರು ಸಮರ್ಥ ಉತ್ತರ ನೀಡಿದ್ದಾರೆ ಎಂದು ವಿವರಿಸಿದರು.

ಸಂವಿಧಾನದ ಕಲಂ 15, 21 ಮತ್ತು 32ಗಳು ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಜೀವಪೋಷಕವಾಗಿವೆ. ಸಂವಿಧಾನದ ಪೀಠಿಕೆ ಹಾಗೂ ವಿವಿಧ ಕಲಂಗಳ ಮಹತ್ವವನ್ನು ವಿವರಿಸಿದ ಅವರು, ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅದರ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲೇನಹಳ್ಳಿ ರಾಮಣ್ಣ ಅವರು ಬಾಬಾಸಾಹೇಬರ ಸಾಮಾಜಿಕ ನ್ಯಾಯದ ಹೋರಾಟ ಹಾಗೂ ಕೊಡುಗೆಗಳನ್ನು ಸ್ಮರಿಸಿದರು. ಡಾ. ವೇದಾಂತ ಏಳಂಜಿ ಮತ್ತು ಡಾ. ಪ್ರದೀಪ್ ಅವರು ವಿಶೇಷ ಉಪನ್ಯಾಸಕ್ಕೆ ಪೂರಕವಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ನಂತರ ಚಿಂತಕರಾದ ಶ್ರೀನಿವಾಸರಾಜು ದೊಡ್ಡೇರಿ ಅವರು ಜಿ.ಎಸ್. ಮಂಜುನಾಥ್ ಅವರಿಗೆ ತಮ್ಮ ಬಾಬಾಸಾಹೇಬ್ ಕೃತಿಯನ್ನು ಕೊಡುಗೆಯಾಗಿ ನೀಡಿದರು. ಕೃತಿಯನ್ನು ಸ್ವೀಕರಿಸಿದ ಮಂಜುನಾಥ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಕಾರ್ಯಕ್ರಮವನ್ನು ಶಿವಶಂಕರ ಸಿಗೇಹಟ್ಟಿ ನಿರೂಪಿಸಿದರು. ಸಿದ್ದೇಶ ಕೆ., ಪ್ರಕಾಶ ಯಾದಲಗಟ್ಟೆ, ಕುಮಾರ್ ಎಚ್., ಭೀಮರಾಜು, ರಾಜು, ಹನುಮಂತಪ್ಪ, ರಾಮಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಮುಖಂಡರಾದ ಸಣ್ಣಪ್ಪ, ಹಿರಿಯೂರು ತಾಲೂಕು ಮಾದಿಗ ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ್, ಸುಧಾಕರ್, ಅಭಿಯಂತರರು, ಆಪ್ತ ಸಹಾಯಕ ಹರೀಶ್ ಕಲ್ಲಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading