ನಾಯಕನಹಟ್ಟಿ: ನಲಗೇತನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ವಿವಿಧ ವ್ಯವಹಾರಗಳಿಂದ ₹1.97 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ತಿಳಿಸಿದರು.




ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಸಂಘದ ವ್ಯಾಪ್ತಿಯ ಸಾಲ ಪಡೆದಿರುವ ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಬರಗಾಲದಂತಹ ಸಂಕಷ್ಟದ ಸಂದರ್ಭದಲ್ಲಿಯೂ ಇಲ್ಲಿನ ರೈತರು ಕುರಿ ಸಾಕಾಣಿಕೆ ಹಾಗೂ ಹೂವಿನ ಕೃಷಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೊಸ ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು ₹2 ಕೋಟಿ ಮೊತ್ತದ ಆಯವ್ಯಯ ಅಂದಾಜು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ನಲಗೇತನಹಟ್ಟಿ ಭಾಗದಲ್ಲಿ ಹೊಸದಾಗಿ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರನ್ನು ಉತ್ತೇಜಿಸುವ ಉದ್ದೇಶದಿಂದ ಸಹಕಾರಿ ಸಂಘದ ವತಿಯಿಂದ ಸಾಲ ಸೌಲಭ್ಯ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
2008-09ರಲ್ಲಿ ಸ್ಥಾಪನೆಯಾದ ಸಂಘದಲ್ಲಿ ಸದಸ್ಯ ರೈತರಿಗೆ ಕೆಸಿಸಿ ಸಾಲ, ಕುರಿ ಸಾಕಾಣಿಕೆ, ಭೂ ಅಭಿವೃದ್ಧಿ ಹಾಗೂ ವಾಹನ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಂಘದಲ್ಲಿ ₹26.12 ಲಕ್ಷ ಉಳಿತಾಯ ಠೇವಣಿ ಸಂಗ್ರಹವಾಗಿದ್ದು, ಸದಸ್ಯರ ₹10.56 ಲಕ್ಷ ಷೇರು ಬಂಡವಾಳವನ್ನು ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ಇರಿಸಲಾಗಿದೆ. 2024-25ನೇ ಸಾಲಿನಲ್ಲಿ ಸಂಘವು ಒಟ್ಟಾರೆ ₹2.56 ಕೋಟಿ ವಹಿವಾಟು ನಡೆಸಿದೆ ಎಂದು ಮಾಹಿತಿ ನೀಡಿದರು.
ಸಭೆಯ ಆರಂಭಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕೃಷಿ ಸಾಲ, ವಾಹನ ಸಾಲ, ಠೇವಣಿ ಹಾಗೂ ಹೆಚ್ಚಿನ ಉಳಿತಾಯ ಮಾಡಿದ ರೈತರು ಮತ್ತು ಷೇರುದಾರರನ್ನು ಗುರುತಿಸಿ ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಎತ್ತಿನ ಓಬಯ್ಯ, ನಿರ್ದೇಶಕರಾದ ಕೆ.ಪಿ.ಮುತ್ತಯ್ಯ, ಜಿ.ಸಿ.ಬೋರಯ್ಯ, ನಲ್ಲನ ಸಣ್ಣಬೋರಯ್ಯ, ತಿಪ್ಪನಬೋರಯ್ಯ, ಲೋಕಪ್ಪ, ಬಿ.ದಾದಾಪೀರ್, ಓಬಮ್ಮ, ಕಮಲಮ್ಮ, ಚಿತ್ತಯ್ಯ ಹಾಗೂ ಸಿಇಒ ಜಿ.ಸಿ.ಸಣ್ಣಬೋರಯ್ಯ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.