ಚಿತ್ರದುರ್ಗ, ಜು. 24: ಚಿತ್ರದುರ್ಗ ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆಯ ಅಂತಿಮ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಬರ ನಿರ್ವಹಣೆ, ಕುಡಿಯುವ ನೀರಿನ ಸ್ಥಿತಿ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಪಂಚ ಗ್ಯಾರಂಟಿಗಳಾದ ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಪ್ರಗತಿ ಕುರಿತು ಸಮಗ್ರ ಮಾಹಿತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಬೆಂಗಳೂರು ವಿಭಾಗದ ಒಂಬತ್ತು ಜಿಲ್ಲೆಗಳ ವಿಪತ್ತು ನಿರ್ವಹಣೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಜೀವನ್ ಮಿಷನ್, ನಗರಾಭಿವೃದ್ಧಿ, ಸಣ್ಣ ನೀರಾವರಿ, ಶಾಲಾ ಶಿಕ್ಷಣ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳ ಮಾಹಿತಿಯನ್ನು ಸರ್ಕಾರ ಈಗಾಗಲೇ ಸಂಗ್ರಹಿಸಿದೆ. ಇದರ ಜೊತೆಗೆ ಚಿತ್ರದುರ್ಗ ಜಿಲ್ಲೆಯ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರಾವರಿ ವಿಸ್ತರಣೆ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯುವ ಸಾಧ್ಯತೆ ಇರುವುದರಿಂದ, ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕುಗಳನ್ನು ಯೋಜನೆ ವ್ಯಾಪ್ತಿಗೆ ಒಳಪಡಿಸುವ ಸಂಬಂಧ ಸಲ್ಲಿಸಲಾದ ಪ್ರಸ್ತಾವನೆಗಳ ಸಂಪೂರ್ಣ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಲಭ್ಯವಿರುವ ಮೇವು ಸಂಗ್ರಹಣೆ, ಈಗಾಗಲೇ ವಿತರಿಸಿರುವ ಮೇವು ಕಿಟ್‌ಗಳು, ಸರ್ಕಾರಕ್ಕೆ ಸಲ್ಲಿಸಿರುವ ಮೇವು ಕಿಟ್ ಬೇಡಿಕೆ ಹಾಗೂ ಜಿಲ್ಲೆಯಲ್ಲಿರುವ 88,740 ಹೆಕ್ಟೇರ್ ಗೋಮಾಳ ಮತ್ತು 8,552 ಹೆಕ್ಟೇರ್ ಅಮೃತ್ ಕಾವಲ್ ಪ್ರದೇಶಗಳ ಮಾಹಿತಿಯನ್ನು ಸಹ ಸಿದ್ಧಪಡಿಸಬೇಕು ಎಂದು ಹೇಳಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಮುಂಗಾರು ಕೊರತೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಬಿತ್ತನೆ ಗುರಿ, ಇದುವರೆಗೆ ಆಗಿರುವ ಬಿತ್ತನೆ ಪ್ರಮಾಣ, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಮತ್ತು ಹಂಚಿಕೆ ಕುರಿತು ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದರು.
ಕುಡಿಯುವ ನೀರಿನ ಸಂಬಂಧ ಶುದ್ಧ ಕುಡಿಯುವ ನೀರಿನ ಘಟಕಗಳು, ಜಲಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು, ಕಾರ್ಯಾತ್ಮಕ ನಳ ಸಂಪರ್ಕಗಳು, ನೀರಿನ ಸಂಕಷ್ಟ ಎದುರಿಸುತ್ತಿರುವ ಗ್ರಾಮಗಳು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವ ಗ್ರಾಮಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯು ದಾಖಲಾತಿ ಪ್ರಮಾಣ ಹಾಗೂ ವಿದ್ಯಾರ್ಥಿಗಳ ನಿರಂತರ ಹಾಜರಾತಿ ಕುಂಠಿತವಾಗಿರುವ ಕಾರಣಗಳ ಕುರಿತು ಸ್ಪಷ್ಟ ವರದಿ ಸಲ್ಲಿಸಬೇಕು ಎಂದರು.
ಪ್ರಗತಿ ಪರಿಶೀಲನಾ ಸಭೆಯ ಆಯೋಜನೆಗಾಗಿ ರಚಿಸಲಾದ ವಿವಿಧ ಸಮಿತಿಗಳ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಇಂದೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.