ತುಮಕೂರು, ಜುಲೈ 18: ಕೊರಟಗೆರೆ ತಾಲ್ಲೂಕಿನ ತುಂಬುಗಾನಹಳ್ಳಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆ.ಎಸ್.ಆರ್.ಪಿ.) 12ನೇ ಬೆಟಾಲಿಯನ್ ಆವರಣದಲ್ಲಿ ಇಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಪರಮಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ಅವರು ಸುಮಾರು 400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಉದ್ದೇಶಿಸಿ ಸ್ಫೂರ್ತಿದಾಯಕ ಉಪನ್ಯಾಸ ನೀಡಿದರು.
12ನೇ ಪಡೆ ಕಮಾಂಡೆಂಟ್ ಶ್ರೀ ಹಂಜಾ ಹುಸೇನ್ ಅವರ ಆಹ್ವಾನದ ಮೇರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ದೇಶಭಕ್ತಿ, ಜೀವನ ಮೌಲ್ಯಗಳು, ಮಾನವೀಯತೆ ಹಾಗೂ ನವಭಾರತ ನಿರ್ಮಾಣದ ಕುರಿತು ಅನೇಕ ಉದಾಹರಣೆಗಳ ಮೂಲಕ ಮನಮುಟ್ಟುವಂತೆ ಮಾತನಾಡಿದರು. ತಮ್ಮ ಭಾಷಣದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಸೇರಿದಂತೆ ಅನೇಕ ದೇಶಭಕ್ತರ ಆದರ್ಶಗಳನ್ನು ಉಲ್ಲೇಖಿಸಿ, ಹೃದಯವಂತಿಕೆ ಇಲ್ಲದೆ ಜೀವನದಲ್ಲಿ ಯಾವುದೇ ಸಾಧನೆ ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಮಾಂಡೆಂಟ್ ಹಂಜಾ ಹುಸೇನ್ ಅವರು, “ಇಂತಹ ಮಹಾನ್ ಸಂನ್ಯಾಸಿಯ ಸ್ಫೂರ್ತಿದಾಯಕ ಉಪನ್ಯಾಸವನ್ನು ಕೇಳುವುದು ನಮ್ಮ ಭಾಗ್ಯ. ಪೂಜ್ಯರು ಮುಂದೆಯೂ ನಮ್ಮ ಪಡೆಯ ಸಿಬ್ಬಂದಿಗೆ ಮಾರ್ಗದರ್ಶನ ನೀಡಬೇಕು” ಎಂದು ಆಶಿಸಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಎ.ಸಿ.ಪಿ. (ನಿ) ಶ್ರೀ ಕೆ.ಎನ್. ನಾರಾಯಣಸ್ವಾಮಿ ಅವರು ಸ್ವಾಮಿ ಜಪಾನಂದಜೀ ಅವರ ಸೇವಾ ಕಾರ್ಯಗಳನ್ನು ಸ್ಮರಿಸಿ, ವಿದೇಶಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳಿದ್ದರೂ ಸ್ವಾಮಿ ವಿವೇಕಾನಂದರ ಆದರ್ಶದಂತೆ ಭಾರತ ಸೇವೆಯನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವುದನ್ನು ವಿವರಿಸಿದರು.
ತಮ್ಮ ಉಪನ್ಯಾಸದಲ್ಲಿ ಸ್ವಾಮೀಜಿಯವರು ಇಂದಿನ ಸಮಾಜದಲ್ಲಿ ದೇಶಾಭಿಮಾನ, ಸಾಮಾಜಿಕ ಹೊಣೆಗಾರಿಕೆ, ಹಿರಿಯರು ಹಾಗೂ ಪೋಷಕರಿಗೆ ಗೌರವ ನೀಡುವ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. “ಮೊದಲು ದೇಶ, ನಂತರ ವೈಯಕ್ತಿಕ ಹಿತ” ಎಂಬ ಮನೋಭಾವವನ್ನು ಪ್ರತಿಯೊಬ್ಬ ನಾಗರಿಕ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಹಾಗೂ ಸುಪ್ರೀಂ ಕೋರ್ಟ್ ವಕೀಲ ಶ್ರೀ ಹೊನ್ನಪ್ಪ, ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್‌ನ ಪ್ರೊ. ಡಾ. ನದೀಮುಲ್ ಹೊಡಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತುಮಕೂರಿನ ಶ್ರೀದೇವಿ ಆಸ್ಪತ್ರೆಯ ವತಿಯಿಂದ ಆರೋಗ್ಯ ಶಿಬಿರವೂ ಆಯೋಜಿಸಲಾಗಿತ್ತು.
ಶಿಸ್ತಿನೊಂದಿಗೆ ಹಾಗೂ ಸಮಯಪಾಲನೆಯೊಂದಿಗೆ ನಡೆದ ಈ ಕಾರ್ಯಕ್ರಮವು ಪೊಲೀಸ್ ಸಿಬ್ಬಂದಿಗೆ ಹೊಸ ಚೈತನ್ಯ ಮತ್ತು ಸ್ಫೂರ್ತಿಯನ್ನು ತುಂಬಿದ ಕಾರ್ಯಕ್ರಮವಾಗಿ ಗಮನ ಸೆಳೆಯಿತು.






About The Author
Discover more from JANADHWANI NEWS
Subscribe to get the latest posts sent to your email.