September 8, 2026
FB_IMG_1788875995185


ಚಿತ್ರದುರ್ಗ :
ಜಿಲ್ಲೆಯ ಒಟ್ಟು ಆರು ತಾಲೂಕುಗಳ ಪೈಕಿ ಚಳ್ಳಕೆರೆ, ಹಿರಿಯೂರು ಹಾಗೂ ಹೊಸದುರ್ಗ ತಾಲೂಕುಗಳನ್ನು ಮಾತ್ರ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ, ಹೊಳಲ್ಕೆರೆ, ಚಿತ್ರದುರ್ಗ ಮತ್ತು ಮೊಳಕಾಲ್ಮೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಅತ್ಯಂತ ವಿಷಾದನೀಯ ಎಂಬುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಸಿ.ಮಹೇಶ್ ನಗರಂಗೆರೆ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ, ಚಿತ್ರದುರ್ಗ ಮತ್ತು ಮೊಳಕಾಲ್ಮೂರು ತಾಲೂಕುಗಳನ್ನು ತಕ್ಷಣ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸಿ, ರೈತರಿಗೆ ಹಾಗೂ ಜನರಿಗೆ ಅಗತ್ಯ ಪರಿಹಾರ ಮತ್ತು ಬರ ಪರಿಹಾರ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಬಹುತೇಕ ಪ್ರದೇಶಗಳು ಮಳೆಯ ಕೊರತೆ, ಅಸಮರ್ಪಕ ಮಳೆ ಹಂಚಿಕೆ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಸೇರಿದಂತೆ ವಿವಿಧ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಪಟ್ಟಿಗೆ ಸೇರಿಸಿ, ಉಳಿದ ಮೂರು ತಾಲೂಕುಗಳನ್ನು ಕೈಬಿಟ್ಟಿರುವುದು ವಾಸ್ತವ ಪರಿಸ್ಥಿತಿಗೆ ವಿರುದ್ಧವಾಗಿದೆ ಎಂದರಲ್ಲದೆ,
ವಿಶೇಷವಾಗಿ ಮೊಳಕಾಲ್ಮೂರು ತಾಲೂಕು ಚಿತ್ರದುರ್ಗ ಜಿಲ್ಲೆಯ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು, ಇಲ್ಲಿನ ರೈತರು ಮಳೆ ಆಧಾರಿತ ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಮಳೆಯ ಕೊರತೆ ಹಾಗೂ ಬೆಳೆ ನಷ್ಟದಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಅದೇ ರೀತಿ ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣ, ಬೆಳೆ ಪರಿಸ್ಥಿತಿ, ಕೃಷಿ ಉತ್ಪಾದನೆ, ಕುಡಿಯುವ ನೀರಿನ ಲಭ್ಯತೆ ಹಾಗೂ ಜಾನುವಾರುಗಳ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ವಾಸ್ತವಿಕ ಪರಿಸ್ಥಿತಿಯ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಬೇಕಾಗಿದೆ.
ಈ ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸದಿರುವುದರಿಂದ ಅಲ್ಲಿನ ರೈತರು ಸರ್ಕಾರದಿಂದ ದೊರೆಯಬೇಕಾದ ಬರ ಪರಿಹಾರ, ಬೆಳೆ ನಷ್ಟ ಪರಿಹಾರ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಇತರೆ ಅಗತ್ಯ ಸರ್ಕಾರಿ ನೆರವುಗಳಿಂದ ವಂಚಿತರಾಗುವ ಸಾಧ್ಯತೆ ಇದೆ.
ಆದ್ದರಿಂದ ಬರ ಘೋಷಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಅಥವಾ ಇತರೆ ಒತ್ತಡಗಳಿಗೆ ಒಳಗಾಗದೆ, ವೈಜ್ಞಾನಿಕ ಹಾಗೂ ವಾಸ್ತವಿಕ ಮಾನದಂಡಗಳ ಆಧಾರದ ಮೇಲೆ ಜಿಲ್ಲೆಯ ಎಲ್ಲಾ ತಾಲೂಕುಗಳ ಪರಿಸ್ಥಿತಿಯನ್ನು ಮರುಪರಿಶೀಲಿಸಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆಗ್ರಹಿಸುತ್ತದೆ ಎಂಬುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಂಗೆರೆ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಸಿ.ಮಹೇಶ್, ರಾಜ್ಯ ಕಾರ್ಯದರ್ಶಿ ಸಿ.ಎನ್.ಮಾರುತಿ, ಚಿತ್ರದುರ್ಗ ಅಧ್ಯಕ್ಷರಾದ ಮುಸ್ತಾಕ್ ಅಹಮದ್, ಪ್ರಧಾನ ಕಾರ್ಯದರ್ಶಿ ತೌಸಿಫ್, ಚಳ್ಳಕೆರೆ ತಾಲೂಕು ಅಧ್ಯಕ್ಷ ಎಂ.ಕೃಷ್ಣಪ್ಪ, ನಾಗರಾಜ್ ಮತ್ತು ಶಿವಶಂಕರಪ್ಪ ಕಾರ್ಯದರ್ಶಿಗಳು, ಆನಂದ್ ಪ್ರಧಾನ ಕಾರ್ಯದರ್ಶಿ ಹೊಳಲ್ಕೆರೆ, ಜಬಿವುಲ್ಲಾ ಉಪಾಧ್ಯಕ್ಷ, ಕೆಂಚಪ್ಪ, ತಿಪ್ಪೇಸ್ವಾಮಿ ಲಲಿತಮ್ಮ, ರಾಮಚಂದ್ರಪ್ಪ ಜಿಲ್ಲಾ ಕಾರ್ಯದರ್ಶಿ ರೈತ ಘಟಕ ಇನ್ನಿತರ ಪದಾಧಿಕಾರಿಗಳು ಮತ್ತು ಸೈನಿಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading