ಚಿತ್ರದುರ್ಗಸೆ.08:
ಜಿಲ್ಲೆಯಲ್ಲಿ ನೈಸರ್ಗಿಕ ಕೃಷಿಯನ್ನು ವ್ಯಾಪಕವಾಗಿ ಉತ್ತೇಜಿಸಲು ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರೈತರ ಅನುಕೂಲಕ್ಕಾಗಿ ಜೀವಾಮೃತ ತಯಾರಿಸುವ ಬಯೋಡೈಜೆಸ್ಟರ್ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಬಿ. ಮಂಜುನಾಥ ತಿಳಿಸಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಕೃಷಿ ಇಲಾಖೆ ಹಾಗೂ ದಾವಣಗೆರೆಯ ಟೆಕ್ನೋಸರ್ವ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ನೈಸರ್ಗಿಕ ಕೃಷಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ಗುಚ್ಛ ಗ್ರಾಮಗಳನ್ನು ಆಯ್ಕೆ ಮಾಡಿ ರೈತರಿಗೆ ವಿವಿಧ ತರಬೇತಿಗಳನ್ನು ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಬಬ್ಬೂರು ಫಾರಣ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನಿಕಾಂತ ಆರ್. ಮಾತನಾಡಿ, ‘ಕೇಂದ್ರದಲ್ಲಿ ಈಗಾಗಲೇ ಸಾವಯವ ಹಾಗೂ ನೈಸರ್ಗಿಕ ಕೃಷಿ ಕುರಿತು ತರಬೇತಿ ನೀಡಲಾಗಿದೆ. ಕೃಷಿ ಸಖಿಯರು ಈ ಮಾಹಿತಿಯನ್ನು ರೈತರಿಗೆ ತಲುಪಿಸಬೇಕು ಎಂದು ಸಲಹೆ ನೀಡಿದರು.
ಟೆಕ್ನೋಸರ್ವ್ ಸಂಸ್ಥೆಯ ಹಿರಿಯ ಯೋಜನಾಧಿಕಾರಿ ಶ್ರೀಕಾಂತ ಭಟ್ ಸಂಸ್ಥೆಯ ಚಟುವಟಿಕೆ ವಿವರಿಸಿದರು. ಸಂಸ್ಥೆಯ ಜಿಲ್ಲಾ ಉಸ್ತುವಾರಿ ಅಧಿಕಾರಿ ಮುರುಗೇಶ್ ಮಾತನಾಡಿ, ‘ಸೃಷ್ಟಿ’ ಯೋಜನೆಯಡಿ 2,000 ರೈತರೊಂದಿಗೆ ಪುನರುತ್ಪಾದಕ ನೈಸರ್ಗಿಕ ಕೃಷಿ ಪದ್ಧತಿಗಳ ಮೇಲೆ ಕೆಲಸ ಮಾಡಲಾಗುತ್ತಿದ್ದು, ಶ್ರೀ ಮಂಜುನಾಥಸ್ವಾಮಿ ರೈತ ಉತ್ಪಾದಕ ಕಂಪನಿ ಜೊತೆ ಕೈಜೋಡಿಸಲಾಗಿದೆ ಎಂದರು.
ಇದೇ ಸಂಸ್ಥೆಯ ಅವಿನಾಶ್ ಮಾತನಾಡಿ, ‘ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಕಡಿಮೆ ವೆಚ್ಚದ ಬಯೋಡೈಜೆಸ್ಟರ್ ಆಧಾರಿತ ಜೀವಾಮೃತ ಘಟಕಗಳನ್ನು ಜಮೀನುಗಳಲ್ಲಿ ಅಳವಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 80ಕ್ಕೂ ಹೆಚ್ಚು ಘಟಕಗಳನ್ನು ನಿರ್ಮಿಸಲಾಗಿದ್ದು, ಮುಂದಿನ ದಿನಗಳಲ್ಲಿ 500 ಘಟಕ ಸ್ಥಾಪಿಸುವ ಗುರಿ ಇದೆ’ ಎಂದರು.
ಕಾರ್ಯಾಗಾರದಲ್ಲಿ ಬಯೋಡೈಜೆಸ್ಟರ್ ಘಟಕಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ತುರುವನೂರಿನ ರಾಜಪ್ಪ, ಕೂನುಬೇವಿನ ತಿಪ್ಪೇಸ್ವಾಮಿ ಹಾಗೂ ಬೆಳಗಟ್ಟದ ಮೈನಾವತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು, ‘ಆತ್ಮ’ ಸಿಬ್ಬಂದಿ, ಕೃಷಿ ಸಖಿಯರು ಹಾಗೂ ರೈತರು ಭಾಗವಹಿಸಿದ್ದರು. ಜೀವಿತಾ ಕಾರ್ಯಕ್ರಮ ನಿರೂಪಿಸಿದರು.
About The Author
Discover more from JANADHWANI NEWS
Subscribe to get the latest posts sent to your email.