ಚಳ್ಳಕೆರೆ, ಜೂ. 8: ಹನ್ನೆರಡನೇ ಶತಮಾನದ ವಿಶ್ವಗುರು ಬಸವಣ್ಣನವರ ಸಮಾನತೆಯ ಚಿಂತನೆ ಹಾಗೂ ಶಿಕ್ಷಣದ ಮೂಲಕ ಸ್ವಾಭಿಮಾನದಿಂದ ಬದುಕುವ ಸಂಘಟನಾ ಶಕ್ತಿಯನ್ನು ಬೋಧಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜ ಅಳವಡಿಸಿಕೊಳ್ಳಬೇಕು ಎಂದು ಶ್ರೀ ನರಹರಿ ಸದ್ಗುರು ಪೀಠಾಧ್ಯಕ್ಷರಾದ ಡಾ. ವೈ. ರಾಜಾರಾಂ ಸ್ವಾಮೀಜಿ ಹೇಳಿದರು.
ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಸೋಮವಾರ ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಹಾಗೂ ಮೂರ್ತಿ ಡೆವಲಪರ್ಸ್ ಗ್ರೂಪ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣ ಹಾಗೂ ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಹಾಗೂ ಲೋಕಕಲ್ಯಾಣದ ಚಿಂತನೆ ಮಾಡಿದ ಮಹನೀಯರ ಜೀವನವನ್ನು ಅನುಸರಿಸಬೇಕು. ತಾನು ಮತ್ತು ತನ್ನ ಕುಟುಂಬದ ಮಿತಿಯನ್ನು ಮೀರಿ ಜನರ ಹಿತಕ್ಕಾಗಿ ದುಡಿದವರು ಮಾತ್ರ ಜನಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಲೋಕವನ್ನು ಅರಿಯಲು ಧ್ಯಾನ ಮಾತ್ರವಲ್ಲ, ಸೇವಾಭಾವನೆಯೂ ಅಗತ್ಯ ಎಂದು ಹೇಳಿದರು.
ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಸಮಾನತೆಯ ಸಂದೇಶದಲ್ಲಿ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಒಂದೇ ನೆಲೆಯಾಗಿ ಕಾಣುತ್ತಾರೆ. ಇಂತಹ ಮಹನೀಯರನ್ನು ಯಾವುದೇ ಜಾತಿ ಅಥವಾ ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಬಸವಣ್ಣ ಮತ್ತು ಅಂಬೇಡ್ಕರ್ ಜಯಂತಿಯನ್ನು ಒಟ್ಟಾಗಿ ಆಚರಿಸುವ ಕುರಿತು ಸಾಮಾಜಿಕ ಚಿಂತಕರಿಂದ ಉತ್ತಮ ಮಾರ್ಗದರ್ಶನ ದೊರೆತಿದೆ ಎಂದರು.
ತಮ್ಮ ಪರಿಸರದಿಂದಲೇ ವಿಶ್ವವನ್ನು ಅರ್ಥಮಾಡಿಕೊಳ್ಳುವ ಚಿಂತನೆ ಬೆಳೆಸಿಕೊಳ್ಳಬೇಕು. ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ, ಆಟೋ ಮತ್ತು ಬೈಕ್ ಸವಾರರಿಗೆ ಚಾಲನಾ ಪರವಾನಗಿ ಸೌಲಭ್ಯ ಹಾಗೂ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಗೆ ಮೊದಲ ಕಂತಾಗಿ ₹1,825 ಪಾವತಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿ ಆಚರಿಸಲಾಗಿದೆ. ಸಮಾಜಮುಖಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.







ಕವಿ ಹಾಗೂ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ ಮತ್ತು ಅಸೂಯೆಯ ಮನೋಭಾವವನ್ನು ತೊಡೆದುಹಾಕಲು ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆದರ್ಶಗಳು ಅಗತ್ಯವಾಗಿವೆ. “ನನಗೂ ನಾಳೆ ಸಾವಿದೆ” ಎಂಬ ಅರಿವು ಹೊಂದಿದ ಮನುಷ್ಯನು ಸಣ್ಣ ಜೀವಿಗೂ ನೋವುಂಟು ಮಾಡುವುದಿಲ್ಲ ಎಂಬ ಬುದ್ಧನ ಸಂದೇಶ ಜಗತ್ತಿಗೆ ಅರ್ಥವಾಗಬೇಕು ಎಂದರು.
ಅನುಭವ ಮಂಟಪದಲ್ಲಿ “ನಾನೊಬ್ಬನೇ ಭಕ್ತ, ಉಳಿದವರೆಲ್ಲ ಶಿವಶರಣರು” ಎಂದು ಸಾರಿದ ಬಸವಣ್ಣನ ಜೀವನದ ಮೌಲ್ಯಗಳನ್ನು ಸಮಾಜ ಅಳವಡಿಸಿಕೊಳ್ಳಬೇಕು. ಶೋಷಿತ ಸಮುದಾಯದ ವಿಮೋಚನೆಗೆ ಶಿಕ್ಷಣವೇ ಮಾರ್ಗ ಎಂದು ಸಾಧಿಸಿ ತೋರಿಸಿದ ಅಂಬೇಡ್ಕರ್ ಯುವಜನತೆಗೆ ಆದರ್ಶವಾಗಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಎಸ್.ಎಚ್. ಸೈಯದ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು. ದಿವಂಗತ ಡಿ. ಸುಧಾಕರ್ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಾಪುರ ರುದ್ರಮುನಿ, ಎಂ. ಶೇಖರಪ್ಪ, ಉಮಾಪತಿ, ಸೈಯದ್ ಅಜಮತ್ ಉಲ್ಲಾ, ಬಿ.ಸಿ. ವೆಂಕಟೇಶ್ ಮೂರ್ತಿ, ಎಸ್. ಕಾರ್ತೀಕ್, ಕೆ. ಲೋಹಿತ್, ಎಸ್.ಬಿ. ಲಿಂಗರಾಜು, ಎಂ.ಎನ್. ಮೃತ್ಯುಂಜಯ, ಯು.ಎಸ್. ವಿಷ್ಣುಮೂರ್ತಿ ರಾವ್, ಸಂಜೀವಪ್ಪ, ಎನ್.ಡಿ. ತಿಪ್ಪೇರುದ್ರಪ್ಪ, ಟಿ.ಆರ್. ಲೋಕೇಶ್, ಜಿ.ವಿ. ಲಕ್ಷ್ಮಣ್, ಯಲ್ಲಪ್ಪ, ದ್ಯಾಮಣ್ಣ, ರಂಗಸ್ವಾಮಿ, ಎ. ಮಹೇಶ್, ಕಮಲಮ್ಮ, ಶಂಕರಪ್ಪ, ವೀರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರ ಶೀರ್ಷಿಕೆ:
ಸಿಎಲ್‌ಕೆ: ಜೂ. 8 (ಜಯಂತಿ) – ಚಳ್ಳಕೆರೆ ತಾಲೂಕಿನ ಲಕ್ಷ್ಮಿಪುರದಲ್ಲಿ ನಗರಂಗೆರೆ ಗ್ರಾಮ ಪಂಚಾಯತಿ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ಬಸವಣ್ಣ–ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಶಿಮುಲ್ ಜಿಲ್ಲಾ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಉದ್ಘಾಟಿಸಿದರು. ಡಾ. ವೈ. ರಾಜಾರಾಂ ಸ್ವಾಮೀಜಿ, ವಿಷ್ಣುಮೂರ್ತಿ ರಾವ್, ಮೃತ್ಯುಂಜಯ, ರುದ್ರಮುನಿ, ಎಂ. ಶೇಖರಪ್ಪ, ಉಮಾಪತಿ ಹಾಗೂ ಎಸ್.ಎಚ್. ಸೈಯದ್ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.